ವಿಜಯಸಾಕ್ಷಿ ಸುದ್ದಿ, ಧಾರವಾಡ: ಸಹಕಾರ ಇಲಾಖೆಯಿಂದ ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961 ಹಾಗೂ ನಿಯಮಾವಳಿಗಳು 1965ರನ್ವಯ ನೋಂದಾಯಿತ ಆಗಿರುವ ಖಾಸಗಿ ಲೇವಾದೇವಿಗಾರರು ಹೆಚ್ಚಿನ ಬಡ್ಡಿ ವಸೂಲು ಮಾಡಿದರೆ ಅವರ ಲೈಸನ್ಸ್ ರದ್ದುಪಡಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಎಚ್ಚರಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲೆಯ ಖಾಸಗಿ ಲೇವಾದೇವಿದಾರರು, ಮೈಕ್ರೋ ಫೈನಾನ್ಸ್ ಮತ್ತು ಫೈನಾನ್ಸ್ ಸಂಸ್ಥೆಗಳ ಪ್ರಮುಖರು ಮತ್ತು ಸಹಕಾರಿ ಇಲಾಖೆ, ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಸಾಲದ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರಿಕಿರಿ, ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಕುರಿತು ಸಭೆ ಜರುಗಿಸಿ ಮಾತನಾಡಿದರು.
ಆರ್ಥಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಾಗ ಸರಕಾರದ ನಿಯಮಗಳ ಪಾಲನೆ ಆಗಬೇಕು. ಸಾಲದ ಮೊತ್ತ, ಬಡ್ಡಿ, ಕಂಡಿಷನ್‌ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರು ಸಾಲದ ಹೆಸರಿನಲ್ಲಿ ಶೋಷಣೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕುರಿತು ಸಹಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆ ನಿಗಾವಹಿಸಿ, ಅಂತಹ ಪ್ರಕರಣಗಳು ಕಂಡುಬAದಲ್ಲಿ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಅವಳಿ ನಗರದಲ್ಲಿ ಸಾಲ ಕೊಟ್ಟವರ ಕಿರಿಕಿರಿಯಿಂದ ತೊಂದರೆ ಅನುಭವಿಸುತ್ತಿರುವ ಕುರಿತು ಸುಮಾರು 31 ಪ್ರಕರಣಗಳು ದಾಖಲಾಗಿದ್ದು, ಈ ಸಂಬAಧ 50 ಜನರನ್ನು ಬಂಧಿಸಲಾಗಿದೆ. ಲೈಸನ್ಸ್ ಪಡೆದು ವ್ಯವಹಾರ ಮಾಡುವವರ ಬಗ್ಗೆ ಮಾತ್ರ ನಿಗಾವಹಿಸದೇ ಲೈಸನ್ಸ್ದಾರರು ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡುವ ಮತ್ತು ಲೈಸನ್ಸ್ ಪಡೆಯದೆ ಸಾಲದ ವ್ಯವಹಾರ ನಡೆಸುವರ ಬಗ್ಗೆ ನಿಗಾವಹಿಸಿ, ಕಾನೂನಿಗೆ ಒಪ್ಪಿಸಬೇಕು ಎಂದರು.
ಸಹಕಾರ ಇಲಾಖೆ ಸಹಾಯಕ ನಿಬಂಧಕ ನಿಂಗರಾಜ ಬೆಣ್ಣಿ ಮಾತನಾಡಿ, ಎಲ್ಲ ಹಣಕಾಸು ಸಂಸ್ಥೆಗಳು ಭದ್ರತಾ ಸಾಲಕ್ಕೆ ವರ್ಷಕ್ಕೆ ಶೇ. 14ರಷ್ಟು, ಹಾಗೂ ಭದ್ರತೆ ಇಲ್ಲದ ಸಾಲಕ್ಕೆ ವರ್ಷಕ್ಕೆ ಶೇ.೧೬ರಷ್ಟು ಬಡ್ಡಿಯನ್ನು ಮಾತ್ರ ಆಕರಣೆ ಮಾಡಬೇಕು. ಕರ್ನಾಟಕ ಲೇವಾದೇವಿಗಾರರ ನಿಯಮಾವಳಿಗಳು 1965ರ ನಿಯಮ 15ರನ್ವಯ ಸಾಲದ ಷರತ್ತುಗಳ ವಿವರಗಳನ್ನು ತೋರಿಸುವ ವಿವರಣಾ ಪತ್ರವನ್ನು ಪ್ರತಿ ತಿಂಗಳು ನಮೂನೆ 6ರಲ್ಲಿ ಕಡ್ಡಾಯವಾಗಿ ಸಹಕಾರಿ ಇಲಾಖೆ ನಿಬಂಧಕರಿಗೆ ಸಲ್ಲಿಸಬೇಕು ಎಂದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೆಜರ್ ಪ್ರಭುದೇವ ಎನ್.ಜಿ., ಖಾಸಗಿ ಲೇವಾದೇವಿದಾರರು, ಮೈಕ್ರೋಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು, ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಾಲದ ಒತ್ತಡದಿಂದಾಗಿ ಎರಡು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಆತ್ಮಹತ್ಯಾ ಪ್ರಯತ್ನ ಮಾಡಲಾಗಿದೆ. ಸಾಲ ಕೊಡುವವರು ವಸೂಲಿಗೆ ಕಾಲಮಿತಿ ಇರಬೇಕು. ಸಾಲ ವಸೂಲು ಸಂದರ್ಭದಲ್ಲಿ ಮಹಿಳೆ, ಮಕ್ಕಳು, ವೃದ್ಧರು ಮತ್ತು ಗರ್ಭೀಣಿಯರ ಆರೋಗ್ಯದ ಬಗೆಗೂ ಕಾಳಜಿ ಇರಬೇಕು. ನ್ಯಾಯಾಲಯದ ಆದೇಶಗಳಾಗಿದ್ದರೂ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಸ್ವಲ್ಪ ಸಮಯಾವಕಾಶ ನೀಡಿ, ಕ್ರಮವಹಿಸಬೇಕು ಎಂದರು.