ವಿಜಯಸಾಕ್ಷಿ ಸುದ್ದಿ, ಗದಗ :ಪ್ರಸುತ್ತ ಸಮಾಜದಲ್ಲಿ ಮಹಿಳೆಯರು ನಿರಂತರವಾಗಿ ಅತ್ಯಾಚಾರ, ಮಾನಸಿಕ ಕಿರುಕುಳ, ಲೈಂಗಿಕ ಹಿಂಸೆ, ದೌರ್ಜನ್ಯ, ಖಿನ್ನತೆ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳಿಗೆ ಸಿಲುಕಿ ಜೀವನ ನಡೆಸಲು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಮಹಿಳೆಯರಿಗಾಗಿ ಇರುವ ವಿಶೇಷ ಕಾನೂನುಗಳ ಜ್ಞಾನ ಹೊಂದುವುದು ಅತಿ ಅವಶ್ಯವಾಗಿದೆ ಎಂದು ಕಾನೂನು ವಿದ್ಯಾರ್ಥಿ ಸಿಕಂದರ ಎಂ.ಆರಿ ಹೇಳಿದರು.
ಶಹರದ ಶ್ರೀ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದ ಕಾನೂನು ಅರಿವು ಘಟಕದ ವತಿಯಿಂದ ಜರುಗಿದ ಕಾನೂನು ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಇರುವ ತಮ್ಮ ಹಕ್ಕುಗಳನ್ನು ಪಡೆದುಕೊಂಡು ಜೀವನ ಮಟ್ಟ ಸುಧಾರಿಸಲು ಹಾಗೂ ಅವರಲ್ಲಿರುವ ಭಯ ಹೋಗಲಾಡಿಸಲು ಮಹಿಳೆಯರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಹಲವಾರು ಕಾನೂನುಗಳಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳುವ ಕುರಿತಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚೆಚ್ಚು ಆಗಬೇಕಿದೆ ಎಂದರು.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿದ್ದರೆ ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ಉಚಿತವಾಗಿ ನ್ಯಾಯವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳನ್ನು ಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಮರ್ಪಕವಾಗಿ ಕಾನೂನು ಅರಿಯಬೇಕು. ಆಗ ಮಾತ್ರ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.
ಕಾನೂನು ವಿದ್ಯಾರ್ಥಿ ಶಿಲ್ಪಾ ಮಂಜಪ್ಪನವರ ಮಾತನಾಡಿ, ಮಹಿಳಾ ಹಕ್ಕುಗಳ ಉಲ್ಲಂಘನೆಯಾದಾಗ ಅದರ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯವಾಗಿದೆ. ಮಹಿಳೆ ಹೆಚ್ಚಾಗಿ ಖಾಸಗಿ ವಲಯದಲ್ಲಿ ಸಕ್ರಿಯಳಾಗಿರುವುದರಿಂದ ಅವಳು ಎದುರಿಸುವ ಸಮಸ್ಯೆಗಳು, ಶೋಷಣೆ, ದೌರ್ಜನ್ಯ ಹೆಚ್ಚು ಚರ್ಚೆಗೆ ಬರುವುದಿಲ್ಲ. ಮಹಿಳೆಯರ ವಿಷಯದಲ್ಲಿ ಸಂಕೀರ್ಣತೆ ಇರುವುದರಿಂದ ಅವರಿಗೆ ಮಹಿಳಾ ಕಾನೂನುಗಳ ಕ್ರಮಬದ್ಧವಾದ ಮಾಹಿತಿ ಅವಶ್ಯಕವಾಗಿದೆ ಎಂದರು.
ಬಸವೇಶ್ವರ ಕಾಲೇಜಿನ ಪ್ರಾಚಾರ್ಯ ಎಂ.ಎಂ. ಬುರುಡಿ, ಉಪನ್ಯಾಸಕಿ ವನಜಾ ಬಿಂಗಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾನೂನು ವಿದ್ಯಾರ್ಥಿ ಪಲ್ಲವಿ ಅರಟಗಲ್ ಮಾತನಾಡಿ, ಉದ್ಯೋಗ ಸ್ಥಳದಲ್ಲಿನ ಹಕ್ಕುಗಳು, ಸಾಂಸ್ಥಿಕ ಕಾನೂನುಗಳು, ಸಮಾನ ವೇತನ, ಕೌಟುಂಬಿಕ ಕಾನೂನು ಶೋಷಣೆಯ ವಿರುದ್ಧ ಪ್ರಶ್ನಿಸುವ ಹಕ್ಕಿನ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಮಹಿಳೆಯರ ಸಮಾನತೆಗೆ ಹಿಂದಿನಿAದಲೂ ಹೋರಾಟ ನಡೆಯುತ್ತಲೇ ಬಂದಿದೆ. ಮಹಿಳೆಯರ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗಾಗಿಯೇ ಮಹಿಳಾ ಆಯೋಗ ಹಾಗೂ ಸರ್ಕಾರಗಳು ಶ್ರಮಿಸುತ್ತಿವೆ ಎಂದರು.