ಬೆಳಗಾವಿ: ವಂಟಮೂರಿ ಗ್ರಾಮದಲ್ಲಿ ನಡೆದ ಮಹಿಳೆಯ ಮೇಲಿನ ಅಮಾನುಷ ದೌರ್ಜನ್ಯ ಪ್ರಕರಣದಲ್ಲಿ ಬೆಳಗಾವಿ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ್ದು, 12 ಮಂದಿ ಆರೋಪಿಗಳಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಎಚ್.ಎಸ್. ಮಂಜುನಾಥ ಅವರು ಈ ತೀರ್ಪು ಪ್ರಕಟಿಸಿದ್ದಾರೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಪ್ರಕರಣದಲ್ಲಿ 12 ಸೆಕ್ಷನ್ಗಳ ಅಡಿಯಲ್ಲಿ ಆರೋಪಗಳು ಸಾಬೀತಾಗಿದ್ದು, ಪ್ರತಿಯೊಂದು ಸೆಕ್ಷನ್ಗೆ ₹1,000 ದಂಡ ವಿಧಿಸಲಾಗಿದೆ. ಬಸಪ್ಪ ನಾಯಿಕ, ರಾಜು ನಾಯಿಕ, ಕೆಂಪಣ್ಣ ನಾಯಿಕ, ಪಾರ್ವತಿ ನಾಯಕ, ಯಲ್ಲವ್ವ ನಾಯಿಕ, ಲಕ್ಕಪ್ಪ ನಾಯಿಕ, ಗಂಗವ್ವ ನಾಯಿಕ, ಸಂಗೀತಾ ಹೆಗ್ಗನಾಯಿಕ, ಸಂತೋಷ ನಾಯಿಕ, ಶೋಭಾ ನಾಯಿಕ, ಲಕ್ಕವ್ವ ನಾಯಿಕ ಹಾಗೂ ಶಿವಪ್ಪ ವನ್ನೂರು ಅವರು ತಪ್ಪಿತಸ್ಥರು ಎಂದು ನ್ಯಾಯಾಲಯ ಘೋಷಿಸಿದೆ. ತೀರ್ಪಿನ ವೇಳೆ ನ್ಯಾಯಾಲಯದ ಆವರಣದಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿತ್ತು.
2023ರ ಡಿಸೆಂಬರ್ 10ರಂದು ನಡೆದ ಈ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಯುವಕನೊಬ್ಬ ತನ್ನ ಪ್ರೇಯಸಿಯೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದಕ್ಕೆ ಆಕೆಯ ಕುಟುಂಬಸ್ಥರು ಆಕ್ರೋಶಗೊಂಡು ಯುವಕನ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಆತನ ತಾಯಿಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಕ್ರೌರ್ಯ ಮೆರೆಯಲಾಗಿತ್ತು.
ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದ ನಂತರ ಪೊಲೀಸರು ಓಡಿಹೋಗಿದ್ದ ಪ್ರೇಮಿಗಳನ್ನು ಪತ್ತೆಹಚ್ಚಿ ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಕಾನೂನುಬದ್ಧವಾಗಿ ಮದುವೆ ಮಾಡಿಸಿದ್ದರು. ದಂಪತಿ ಪ್ರಸ್ತುತ ಶಾಂತಿಯುತ ಜೀವನ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಾಪರಾಧಿ ಸೇರಿ ಒಟ್ಟು 13 ಮಂದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. ಇಂದು ಬೆಳಿಗ್ಗೆ ಹಿಂಡಲಗಾ ಜೈಲಿನಿಂದ ಆರೋಪಿಗಳನ್ನು ಪೊಲೀಸ್ ವಾಹನಗಳಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಸುದೀರ್ಘ ಎರಡು ವರ್ಷಗಳ ವಿಚಾರಣೆಯ ಬಳಿಕ ಬಾಲಾಪರಾಧಿಯನ್ನು ಹೊರತುಪಡಿಸಿ ಉಳಿದ 12 ಮಂದಿ ತಪ್ಪಿತಸ್ಥರು ಎಂದು ನ್ಯಾಯಾಲಯ ಅಂತಿಮ ತೀರ್ಪು ನೀಡಿದೆ.



