ವಿಜಯಸಾಕ್ಷಿ ಸುದ್ದಿ, ಗದಗ: ಯಾವ ಸಹಕಾರ ಸಂಘದ ರಿಟರ್ನಿಂಗ್ ಅಧಿಕಾರಿಯಾಗಿ ನೇಮಿಸಲಾಗಿದೆಯೋ ಆ ಸಹಕಾರ ಸಂಘದ ಉಪವಿಧಿಯನ್ನು ಅಧ್ಯಯನ ಮಾಡಿ ಆಡಳಿತ ಮಂಡಳಿಯ ಸ್ವರೂಪವನ್ನು ರಿಟರ್ನಿಂಗ್ ಅಧಿಕಾರಿಗಳು ತಿಳಿದುಕೊಳ್ಳಬೇಕು. ಉಪವಿಧಿಯು ನೋಂದಣಿಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಕಾನೂನಾತ್ಮಕವಾಗಿ ಸಹಕಾರ ಸಂಘಗಳ ನಿರ್ವಹಣೆ ಮಾಡಿಕೊಂಡು ಸಂಘಗಳನ್ನು ಬೆಳಸಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡಿ ಹೇಳಿದರು.
ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್, ಕೆ.ಸಿ.ಸಿ. ಬ್ಯಾಂಕ್ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯಲ್ಲಿ ಚುನಾವಣೆ ಜರುಗಲಿರುವ ಸಹಕಾರ ಸಂಘಗಳ ರಿಟರ್ನಿಂಗ್ ಅಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 20ರ ಮೇರೆಗೆ ಸದಸ್ಯರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಕಳೆದ 5 ವಾರ್ಷಿಕ ಮಹಾಸಭೆಗಳ ಪೈಕಿ ಕನಿಷ್ಠ ಯಾವುದೇ 2 ಸಭೆಗಳಿಗೆ ಹಾಜರಾಗುವುದು ಮತ್ತು ಕಳೆದ 5 ಸಹಕಾರ ವರ್ಷಗಳ ಪೈಕಿ ಕನಿಷ್ಠ ಯಾವುದೇ 2 ಸಹಕಾರ ವರ್ಷಗಳಲ್ಲಿ ಸಂಘದ ಉಪವಿಧಿಗಳಲ್ಲಿ ನಿಗದಿಪಡಿಸಿದ ಕನಿಷ್ಠ ಸೇವೆಗಳನ್ನು ಬಳಸಿಕೊಳ್ಳುವುದು ಕಡ್ಡಾಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವಾಯ್.ಎಫ್. ಪಾಟೀಲ, ನಿರ್ದೇಶಕರಾದ ಎಸ್.ಕೆ. ಕುರಡಗಿ, ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಶಾಂತಾ ಎಚ್.ಎಂ, ಧಾರವಾಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸಿ.ಎಸ್. ಕಲ್ಲನಗೌಡರ್, ಡಿ.ಐ. ನದಾಫ್, ಬಸವರಾಜ ಜುಮ್ಮಣ್ಣವರ, ಕಿರಣಕುಮಾರ ಹುಗ್ಗಿ ಉಪಸ್ಥಿತರಿದ್ದರು.
ತರಬೇತಿ ಕಾರ್ಯಾಗಾರದಲ್ಲಿ ಸಹಕಾರ ಸಂಘಗಳ ಆಡಳಿತ ಮಂಡಳಿ ಚುನಾವಣೆ ಜರುಗಿಸುವ ವಿಧಿ-ವಿಧಾನಗಳ ಕುರಿತು ಶಂಕರ ಎಸ್. ಕರಬಸಣ್ಣವರ, ಸಹಕಾರ ಸಂಘಗಳ ಪದಾಧಿಕಾರಿಗಳ ಚುನಾವಣೆಯ ಕುರಿತು ಸುನೀಲ್ಕುಮಾರ ಚಳಗೇರಿ ಉಪನ್ಯಾಸ ನೀಡಿದರು.
ಗಂಗಾಪೂರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ರೇಣುಕಾ ಈರಣ್ಣಗೌಡರ್ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ಮಹಿಳಾ ಸಹಕಾರ ಶಿಕ್ಷಕಿ ಆರ್.ಸಿ. ಯಲಿಗಾರ ವಂದಿಸಿದರು.
ಕೆಎಂಎಫ್ ನಿರ್ದೇಶಕ ಎಚ್.ಜಿ. ಹಿರೇಗೌಡರ್ ಮಾತನಾಡಿ, ಆಡಳಿತ ಮಂಡಳಿ ಸದಸ್ಯರ ಚುನಾವಣೆ ನಡೆಸಲು ಅತ್ಯಂತ ಪ್ರಮುಖ ಅವಶ್ಯಕತೆ ಅರ್ಹ ಮತದಾರರ ಯಾದಿ. ಅನರ್ಹ ಸದಸ್ಯರಿಗೆ ನೋಟಿಸ್ ಹೊರಡಿಸಿದ 15 ದಿನಗಳೊಳಗಾಗಿ ಆಕ್ಷೇಪಣೆ ಸಲ್ಲಿಸಲು ತಿಳಿಸಬೇಕು. ಯೂನಿಯನ್ದ ವತಿಯಿಂದ ಜರುಗುವ ಇಂತಹ ತರಬೇತಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.



