ಸೇಬಿನ ಬೆಲೆ ಮೀರಿಸಿದ ನಿಂಬೆ!

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಉತ್ತರ ಕರ್ನಾಟಕದಲ್ಲಿ ಬೇಸಿಗೆಯ ಬಿಸಿ ತಡೆದುಕೊಳ್ಳಲಾಗದ ಜನ ಬಿಸಿಗಾಳಿಯಿಂದ ದೇಹವನ್ನು ತಂಪಾಗಿಡಲು ಪರದಾಡುತ್ತಿದ್ದಾರೆ. ಸುಲಭವಾಗಿ ನಿಂಬೆ ಹಣ್ಣಿನ ಪಾನಕ, ಜ್ಯೂಸ್‌ಗಳಿಂದ ದೇಹವನ್ನು ತಂಪಾಗಿಸಿಕೊಳ್ಳಬಹುದಾಗಿದ್ದು, ಇದರಿಂದ ನಿಂಬೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದೆ.

Advertisement

ಕೆ.ಜಿ ಬಾಳೆಹಣ್ಣಿನ ಬೆಲೆ 100 ರೂ, ಸೇಬು ಬೆಲೆ 200 ರೂಪಾಯಿ ಆದರೆ, 100 ನಿಂಬೆ ಹಣ್ಣಿನ ಬೆಲೆ 500ರಿಂದ 600 ರೂಪಾಯಿ ತಲುಪಿದೆ. ಬಿಸಿಗಾಳಿ ಹಾಗೂ ಉಷ್ಣದಿಂದ ಬಾಣಂತಿಯರು, ಗರ್ಭಿಣಿಯರು, ವಯೋವೃದ್ಧರು, ವಯಸ್ಕರರು ಹಾಗೂ ಮಕ್ಕಳು ಎಚ್ಚರಿಕೆಯಿಂದಿರುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ.

ಇದರಿಂದ ಜ್ಯೂಸ್ ಅಂಗಡಿಗಳಿಗೆ ಬರುವ ಗ್ರಾಹಕರು, ನಿಂಬೆ ಹಣ್ಣಿನ ಜ್ಯೂಸ್‌ಗಳನ್ನೇ ಹೆಚ್ಚಾಗಿ ಕೇಳುತ್ತಿದ್ದಾರೆ. ಆದರೆ ಒಂದು ನಿಂಬೆ ಹಣ್ಣಿನ ಬೆಲೆ 6ರಿಂದ 8 ರೂಪಾಯಿ ಆಗಿರುವುದರಿಂದ ಜ್ಯೂಸ್ ಅಂಗಡಿಯವರು ವಿಧಿಯಿಲ್ಲದೆ ದುಬಾರಿ ಬೆಲೆ ತೆತ್ತು ನಿಂಬೆ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ.

ಬೇಸಿಗೆ ಬಂತೆಂದರೆ ಮನುಷ್ಯನ ಅರೋಗ್ಯದಲ್ಲಿ ಹಲವು ರೀತಿಯಲ್ಲಿ ಏರುಪೇರು ಉಂಟಾಗುತ್ತದೆ. ಪ್ರಮುಖವಾಗಿ ದೇಹದಲ್ಲಿನ ನೀರಿನಾಂಶ ಕಡಿಮೆ ಆಗುತ್ತಾ ಹೋಗುತ್ತದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಆದಷ್ಟು ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಾರುಕಟ್ಟೆಯಲ್ಲಿ ಸಿಗುವ ಕೃತಕ ಸಕ್ಕರೆ ಅಂಶ ಇರುವ ತಂಪು ಪಾನೀಯಗಳ ಮೊರೆ ಹೋಗಬಾರದು. ಇದರಿಂದ ಆರೋಗ್ಯ ಸಮಸ್ಯೆಗಳು ಬರುವ ಜೊತೆಗೆ ದೀರ್ಘಕಾಲದ ಕಾಯಿಲೆಗಳು ಕೂಡ ಬರುವ ಸಾಧ್ಯತೆ ಇರುತ್ತದೆ.

ಜ್ಯೂಸ್ ಅಂಗಡಿಗಳಲ್ಲಿ ಲಿಂಬೆಹಣ್ಣಿನ ಲಿಂಬು ಸೋಡಾ, ಲಸ್ಸಿ, ಮಜ್ಜಿಗೆ, ಎಳೆನೀರು, ಹಣ್ಣುಗಳ ಜ್ಯೂಸ್ ಕುಡಿಯಬೇಕು. ಇಲ್ಲವಾದರೆ ಇದರ ಬದಲು ಮನೆಯಲ್ಲಿಯೇ ರೆಡಿ ಮಾಡಿದ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ಹಾಗೂ ವಿಟಮಿನ್ ಸಿ ಅಂಶ ದೇಹದ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ವೈದ್ಯರು.

ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ಕಾರಣ ಬಿಸಿಲಿನಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಯಸ್ಸಾದವರು ಮತ್ತು ಮಕ್ಕಳು ಹೊರಗಡೆ ಹೋಗಬಾರದು. ತಂಪು ಪಾನೀಯಗಳಿಗೆ ಮೊರೆ ಹೋಗದೆ ಲಿಂಬೆಹಣ್ಣಿನ, ಹಣ್ಣುಗಳ, ಎಳನೀರು ಕುಡಿಯಬೇಕು. ಬಿಸಿಲಿನಲ್ಲಿ ವೃದ್ಧರಿಗೆ ಮತ್ತು ಮಕ್ಕಳಿಗೆ ನೀರನ್ನು ಕುಡಿಸುತ್ತಿರಬೇಕು ಒಂದು ವೇಳೆ ಮಕ್ಕಳಲ್ಲಿ ನಿರ್ಜಲೀಕರಣ ಉಂಟಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು

– ಡಾ. ಲಕ್ಷ್ಮಣ ಪೂಜಾರ.

ತಾಲೂಕಾ ಆರೋಗ್ಯ ಅಧಿಕಾರಿಗಳು, ಮುಂಡರಗಿ.

ಬೆಸಿಗೆಯ ಬಿಸಿಲಿನ ತಾಪಕ್ಕೆ ಕೃತಕ ಪಾನೀಯಗಳಿಗೆ ಮೊರೆ ಹೋಗುವುದಕ್ಕಿಂತ ಮುಂದಿನ ಪೀಳಿಗೆಯ ಹಿತಕ್ಕಾಗಿ ಗಿಡಗಳನ್ನು ಬೆಳಸುವುದರ ಮೂಲಕ ಪ್ರತಿಯೊಬ್ಬರೂ ಅರಣ್ಯವನ್ನು ಸಂರಕ್ಷಿಸಿ ಬೆಳೆಸಬೇಕಾಗಿದೆ. ಇದರಿಂದ ಮುಂದಿನ ದಿನಮಾನಗಳಲ್ಲಿ ಬಿಸಿಲಿನ ತಾಪಮಾನ ತಗ್ಗಿಸಲು ಸಾಧ್ಯ. ಇದಕ್ಕಾಗಿ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಸಹಕಾರ ನೀಡಿ.

– ಮಂಜುನಾಥ ಮೇಗಲಮನಿ.

ಕಪ್ಪತ್ತಗುಡ್ಡ ಅರಣ್ಯ ವಲಯ ಅಧಿಕಾರಿ.


Spread the love

LEAVE A REPLY

Please enter your comment!
Please enter your name here