ಗುಂಜಳ ರಸ್ತೆಯ ಜಮೀನುಗಳಲ್ಲಿ ಚಿರತೆ ಸಂಚಾರ: ರೈತ ಸಮುದಾಯದಲ್ಲಿ ಆತಂಕ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಹೊರವಲಯದ ಗುಂಜಳ ರಸ್ತೆಯ ಜಮೀನುಗಳಲ್ಲಿ ಮಂಗಳವಾರ ಸಂಜೆ ಚಿರತೆಯೊಂದು ಸಂಚರಿಸಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿರುವ ವಿಷಯ ಎಲ್ಲೆಡೆ ಹರಡಿ, ರೈತ ಸಮುದಾಯದಲ್ಲಿ ಆತಂಕ ಮನೆ ಮಾಡಿದೆ.

Advertisement

ಪಟ್ಟಣದ ಹಳ್ಳದಕೇರಿ ಓಣಿಯ ರೈತ ಕುಮಾರ ಸಾಲಾವಳಿಮಠ ಎಂಬುವರು ಮಂಗಳವಾರ ಇಳಿಸಂಜೆ ತಮ್ಮ ಜಮೀನಲ್ಲಿ ಕೆಲಸ ಮಾಡುವ ವೇಳೆ ಚಿರತೆ ಕಂಡು ಬಂದಿರುವ ಬಗ್ಗೆ ವಿಷಯ ಹಂಚಿಕೊAಡಿದ್ದಾರೆ. ಮಾಹಿತಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬುಧವಾರ ಬೆಳಿಗ್ಗೆ ರೈತರೊಂದಿಗೆ ಚಿರತೆ ಸಂಚರಿಸಿದೆ ಎಂಬ ಸುತ್ತಮುತ್ತಲಿನ ಪ್ರದೇಶವನ್ನೆಲ್ಲ ಪರಿವೀಕ್ಷಣೆ ಮಾಡಿದ್ದಾರೆ. ಅದರ ಜಾಡು ಹಿಡಿದು ಪರೀಕ್ಷಿಸಿದ ವೇಳೆ ಈ ಪ್ರದೇಶದಲ್ಲಿ 2-3 ದಿನಗಳ ಹಿಂದೆ ಕುರಿಯೊಂದನ್ನು ಯಾವುದೋ ಪ್ರಾಣಿಗಳು ತಿಂದಿರುವುದು ಕಂಡುಬAದಿದ್ದು, ಅಲ್ಲಿದ್ದ ಕೂದಲು, ಎಲುಬು ಕಂಡು ಬಂದಿವೆ. ಅಲ್ಲದೇ ಪ್ರತ್ಯಕ್ಷದರ್ಶಿ ರೈತರು ಹೇಳಿದ ಮಾಹಿತಿಯ ಜಾಡು ಹಿಡಿದು ಪರೀಕ್ಷಿಸಿದಾಗ ಚಿರತೆಯ ಹೆಜ್ಜೆ ಅಸ್ಪಷ್ಟವಾಗಿ ಕಂಡು ಬಂದಿರುವುದು ರೈತ ಸಮುದಾಯದಲ್ಲಿನ ಆತಂಕ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.

ಸ್ಥಳ ಪರೀವೀಕ್ಷಣೆ ಮಾಡಿದ ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ, ಅರಣ್ಯ ಇಲಾಖೆಯ ಸಿಬ್ಬಂದಿ ಮಂಜುನಾಥ ಚೌಹಾಣ ಪ್ರತಿಕ್ರಿಯಿಸಿ, ರೈತರ ಹೇಳಿಕೆಯ ಆಧಾರದಲ್ಲಿ ರೈತರೊಂದಿಗೆ ಇಡೀ ಪ್ರದೇಶದ ಪರೀಕ್ಷಿಸಲಾಗಿ ಅಸ್ಪಷ್ಟ ಹೆಜ್ಜೆ ಗುರುತು ಮತ್ತು ಕಾಕತಾಳೀಯ ಎನ್ನುವಂತೆ ಇದೇ ಪ್ರದೇಶದಲ್ಲಿ ಯಾವುದೋ ಪ್ರಾಣಿ ಕುರಿಯೊಂದನ್ನು ತಿಂದು ಹಾಕಿರುವುದು ಕೊಂಚ ಗೊಂದಲಕ್ಕೆ ಕಾರಣವಾಗಿದೆ. ರೈತರು ನೋಡಿರುವುದು ಚಿರತೆಯೋ, ತೋಳವೋ, ಕತ್ತೆ ಕಿರುಬವೋ ಎಂಬ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ ಎಂದರು.

ಕೆಲವು ದಿನಗಳ ಹಿಂದೆ ಜಿಲ್ಲೆಯ ಗಜೇಂದ್ರಗಡದಲ್ಲಿ ಒಂದು ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಅಲ್ಲದೆ ಬಿಂಕದಕಟ್ಟಿ ಹಾಗೂ ಹರ್ತಿ ಗ್ರಾಮದ ಸುತ್ತಮುತ್ತ ಚಿರತೆ ಕಂಡು ಬಂದಿರುವ ಬಗ್ಗೆ ಕೇಳಿಬಂದಿತ್ತು. ಅಲ್ಲದೇ ಇದೇ ಮೊದಲ ಬಾರಿ ಲಕ್ಮೇಶ್ವರ ಭಾಗದ ರೈತರ ಜಮೀನುಗಳಲ್ಲಿ ಚಿರತೆ ಕಂಡು ಬಂದಿರುವುದು ರೈತರಲ್ಲಿ ಭೀತಿಯನ್ನುಂಟು ಮಾಡಿದೆ. ಸದ್ಯ ರೈತರು ತಮ್ಮ ಜಮೀನುಗಳಲ್ಲಿಯೇ ಮೆಣಸಿನಕಾಯಿ ಮತ್ತು ಹಿಂಗಾರಿನ ಬೆಳೆ ಸಂರಕ್ಷಣೆಗಾಗಿ ಜಾನುವಾರುಗಳೊಂದಿಗೆ ಬೀಡು ಬಿಟ್ಟಿರುತ್ತಾರೆ. ಚಿರತೆ ಕಂಡು ಬಂದಿರುವ ವಿಷಯ ರೈತರನ್ನು ಚಿಂತೆಗೀಡು ಮಾಡಿದೆ. ಆದ್ದರಿಂದ ಅರಣ್ಯ ಇಲಾಖೆ ಚಿರತೆಯ ಸಂಚಾರದ ಬಗ್ಗೆ ಸ್ಪಷ್ಟ ಮಾಹಿತಿ ಕಲೆಹಾಕಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರಾದ ನಿಂಗಪ್ಪ ಬನ್ನಿ, ಮಂಜುನಾಥ ಕೊಟಗಿ, ಶಿವಣ್ಣ ಕಟಗಿ, ಸಂಗಯ್ಯ ಸಾಲಾವಳಿಮಠ, ಕಿಟ್ಟಣ್ಣ ಪಾಟೀಲ, ನಾಗಪ್ಪ ರಡ್ಡೇರ, ಸೋಮಣ್ಣ ಕಮತದ, ರಾಘು ಕರೆತ್ತಿನ, ಗಂಗಾಧರ ಅಂಕಲಿ, ರಾಜು ಮುಳಗುಂದ, ಫಕ್ಕೀರಪ್ಪ ಕೊಡ್ಲಿ, ಈರಪ್ಪ ಕಟ್ಟಿಮನಿ, ಚನ್ನವೀರಗೌಡ ಪಾಟೀಲ ಮತ್ತಿತರರು ಒಕ್ಕೊರಲಿನ ಮನವಿ ಮಾಡಿದ್ದಾರೆ.

ಈ ಭಾಗದ ರೈತರು ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಯಾವುದೇ ಸಂದರ್ಭದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ರಾತ್ರಿ ವೇಳೆ ಹೊಲದಲ್ಲಿ ಬೀಡುಬಿಟ್ಟಿರುವ ರೈತರು ಹಾಗೂ ಕುರಿಗಾಹಿಗಳು ಬ್ಯಾಟರಿ ಬಳಕೆ, ಬೆಂಕಿ ಹಾಕುವದು ಸೇರಿ ಅಗತ್ಯ ಮುಂಜಾಗೃತೆ ಕ್ರಮ ವಹಿಸಬೇಕು. ಈ ಬಗ್ಗೆ ಇಲಾಖೆಯೂ ಸಹ ನಿರ್ಲಕ್ಷö್ಯ ತೋರದೇ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ ತಿಳಿಸಿದರು.


Spread the love

LEAVE A REPLY

Please enter your comment!
Please enter your name here