ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ತಪ್ಪಲಿನ ತಾಳು ಬೆಟ್ಟದಲ್ಲಿ ಪಾದಯಾತ್ರಿಗೆ ಚಿರತೆ ದಾಳಿಯಿಂದ ಸಾವಾದ ಘಟನೆ ನಂತರವೂ ಚಿರತೆ ಚಟುವಟಿಕೆ ನಿಂತಿಲ್ಲ. ಬುಧವಾರ ರಾತ್ರಿ ಮತ್ತೆ ಅದೇ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವ ದೃಶ್ಯ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.
ಚಿರತೆ ರಸ್ತೆ ತಡೆಗೋಡೆ ಮೇಲೆ ಕುಳಿತುಕೊಂಡಿರುವುದು ಹಾಗೂ ರಸ್ತೆಯ ಪಕ್ಕದಲ್ಲಿ ಹೊಂಚು ಹಾಕುತ್ತಿರುವ ದೃಶ್ಯ ವೈರಲ್ ಆಗುತ್ತಿದ್ದಂತೆ, ಜಿಲ್ಲಾಡಳಿತ ತಕ್ಷಣವೇ ಎಚ್ಚರಿಕೆ ಕ್ರಮ ಕೈಗೊಂಡಿದೆ. ಪಾದಯಾತ್ರೆ ಹಾಗೂ ದ್ವಿಚಕ್ರ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ಅರಣ್ಯ ಇಲಾಖೆ ಚಿರತೆ ಸೆರೆಗಾಗಿ ಬೋನು ಅಳವಡಿಕೆ, ಡ್ರೋನ್ ಮೂಲಕ ನಿಗಾವಹಣೆ ಹಾಗೂ ವಿಶೇಷ ಕಾರ್ಯಪಡೆ ನಿಯೋಜನೆ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸ್ಥಳದಲ್ಲಿ ಗಸ್ತು ತೀವ್ರಗೊಳಿಸಲಾಗಿದೆ.
ಸ್ಥಳೀಯ ಶಾಸಕ ಮಂಜುನಾಥ್ ಮಾತನಾಡಿ, “ಭಕ್ತರ ಸುರಕ್ಷತೆ ನಮ್ಮ ಹೊಣೆ. ಪ್ರತೀ ಜೀವವೂ ಅಮೂಲ್ಯ. ಶನಿವಾರ ಶಿವರಾತ್ರಿ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಪಾದಯಾತ್ರೆಗೆ ಅವಕಾಶ ನೀಡುವ ಚಿಂತನೆ ಇದೆ. ಅರಣ್ಯ ಇಲಾಖೆ ಮತ್ತು ಪ್ರಾಧಿಕಾರ ಎರಡಕ್ಕೂ ಗಸ್ತು ಹೆಚ್ಚಿಸಲು ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.



