ಬೆಂಗಳೂರು: ಚಾಮರಾಜನಗರ, ಮೈಸೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಹುಲಿ–ಚಿರತೆಯ ಹಾವಳಿ ವರದಿಯಾಗುತ್ತಿದ್ದ ನಡುವೆಯೇ, ಇದೀಗ ರಾಜಧಾನಿ ಬೆಂಗಳೂರಿನಲ್ಲೇ ಚಿರತೆ ಪ್ರತ್ಯಕ್ಷವಾಗಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ.
ಜೆಪಿ ನಗರದ 9ನೇ ಫೇಸ್ ಸಮೀಪದ ಅಂಜನಾಪುರ ಬಿಡಿಎ ಲೇಔಟ್ನಲ್ಲಿ ಕಳೆದ ಒಂದು ವಾರದಿಂದ ಚಿರತೆ ಓಡಾಟ ನಡೆಸುತ್ತಿರುವುದು ಸ್ಥಳೀಯ ನಿವಾಸಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ. ರಾತ್ರಿ–ಹಗಲು ಎನ್ನದೇ ಚಿರತೆ ಸಂಚರಿಸುತ್ತಿರುವ ದೃಶ್ಯಗಳು ಮನೆಗಳ ಮುಂದೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಕಳೆದ ಒಂದು ವಾರದಲ್ಲಿ ನಾಲ್ಕು–ಐದು ಬಾರಿ ಚಿರತೆ ಕಾಣಿಸಿಕೊಂಡಿದ್ದು, ನಿವಾಸಿಗಳು ಮನೆಯಿಂದ ಹೊರಗೆ ಹೆಜ್ಜೆ ಇಡುವುದಕ್ಕೂ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಕೆಲವರು ಕಾರಿನಲ್ಲಿ ಹೊರಡುವ ವೇಳೆ ಚಿರತೆ ಅಡ್ಡ ಬಂದ ದೃಶ್ಯವನ್ನು ತಮ್ಮ ಮೊಬೈಲ್ ಫೋನ್ಗಳಲ್ಲಿ ಸೆರೆಹಿಡಿದಿದ್ದಾರೆ.
ಅಂಜನಾಪುರದ ಸಮೀಪದಲ್ಲೇ ತುರಹಳ್ಳಿ ಹಾಗೂ ಬನ್ನೇರುಘಟ್ಟ ಅರಣ್ಯ ಪ್ರದೇಶಗಳಿದ್ದು, ಅಲ್ಲಿನ ಚಿರತೆಗಳು ನಾಡಿನತ್ತ ನುಗ್ಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ನಗರಕ್ಕೆ ಲಗ್ಗೆಯಿಟ್ಟಿರುವ ಚಿರತೆ ಈಗಾಗಲೇ ಒಂದು ನಾಯಿಯನ್ನು ಹೊತ್ತೊಯ್ದಿದೆ ಎಂಬ ಆರೋಪವೂ ಕೇಳಿಬಂದಿದೆ.
ಚಿರತೆ ಹಾವಳಿಯಿಂದ ಆತಂಕಗೊಂಡಿರುವ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸುವ ಮೊದಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.



