ವಿಜಯಸಾಕ್ಷಿ ಸುದ್ದಿ, ಗದಗ : ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಸ್ಪರ್ಶ ಜ್ಞಾನ ಇಲ್ಲದ ಒಂದು ಅಥವಾ ಹಲವಾರು ಮಚ್ಚೆಗಳು ಇದ್ದರೆ ನಿಮ್ಮ ಮನೆಮನೆಗೆ ಬರುವ ಆರೋಗ್ಯ ಇಲಾಖೆಯವರಲ್ಲಿ ಪರೀಕ್ಷಿಸಿಕೊಳ್ಳಬೇಕೆಂದು ಆರೋಗ್ಯ ನಿರೀಕ್ಷಣಾಧಿಕಾರಿ ಶಿದ್ದಪ್ಪ ಎನ್.ಲಿಂಗದಾಳ ಹೇಳಿದರು.
ಅವರು ಕರ್ನಾಟಕ ಸರಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಗದಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಷ್ಠರೋಗ ವಿಭಾಗ, ಗದಗ ರಾಷ್ಟ್ರೀಯ ಆರೋಗ್ಯ ಅಭಿಯಾನದ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಟಗೇರಿ ಅಡವಿಸೋಮಾಪೂರ ಆಯುಷ್ಮಾನ್ ಆರೋಗ್ಯ ಮಂದಿರದಿಂದ ಹಮ್ಮಿಕೊಂಡಿದ್ದ ಕುಷ್ಠರೋಗ ಪ್ರಕರಣ ಪತ್ತೆ ಆಂದೋಲನ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡಿ ಮಾತನಾಡುತ್ತಿದ್ದರು.
ಕುಷ್ಠರೋಗವು ಮೈಕ್ರೋಬ್ಯಾಕ್ಟಿರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗ. ಇದು ಮುಖ್ಯವಾಗಿ ನರಗಳು ಹಾಗೂ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಚರ್ಮದ ಮೇಲ್ಬಾಗದಲ್ಲಿ ಮಚ್ಚೆಗಳು, ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಒಂದು ಅಥವಾ ಹಲವಾರು ಮಚ್ಚೆಗಳು, ಆ ಮಚ್ಚೆಗಳ ಮೇಲೆ ಸ್ಪರ್ಶ ಜ್ಞಾನ ಇರುವುದಿಲ್ಲ ಮತ್ತು ಹೊಳಪಿನಿಂದ ಕೂಡಿದ ದಪ್ಪನಾದ ಚರ್ಮ ಮತ್ತು ಚರ್ಮದ ಮೇಲೆ ಸಣ್ಣ ಗಂಟುಗಳು (ಇವುಗಳು ವಿಶೇಷವಾಗಿ ಕಿವಿಯ ಹಾಲೆ, ಮುಖ ಮತ್ತು ಕೈ ಕಾಲುಗಳ ಮೇಲೆ ಕಾಣಬಹುದು) ಪ್ರಮುಖ ಲಕ್ಷಣಗಳಾಗಿವೆ ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸವಿತಾ ಪವಾರ ಮಾತನಾಡಿ, ದೇಹದ ಮೇಲೆ ಯಾವುದಾದರೂ ತದ್ದು ಮಚ್ಚೆ ಕಲೆಗಳು ಚಿಹ್ನೆಗಳು ಕಂಡುಬಂದರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಂದ ಕುಷ್ಠರೋಗದ ಬಗ್ಗೆ ಪರೀಕ್ಷಿಸಿಕೊಳ್ಳಿ. ಕುಷ್ಠರೋಗ ಖಚಿತಪಟ್ಟರೆ ಉಚಿತವಾಗಿ ಬಹುವಿಧ ಔಷದದಿಂದ ಗುಣಪಡಿಸಲಾಗುವುದು. ಚರ್ಮದ ಮೇಲೆ ಮಚ್ಚೆಗಳು.-1ರಿಂದ 5 ಪಾಸಿಬ್ಯಾಸಿಲರಿ 6 ತಿಂಗಳು ಮತ್ತು ಮಲ್ಟಿಬ್ಯಾಸಿಲರಿ-5ಕ್ಕಿಂತ ಹೆಚ್ಚು ಚರ್ಮದ ಮೇಲಿನ ಮಚ್ಚೆಗಳು 12 ತಿಂಗಳು. ಹೀಗೆ ರೋಗಿಯು ನಿಯಮಿತವಾಗಿ ಪೂರ್ಣ ಚಿಕಿತ್ಸೆ ಪಡೆದಲ್ಲಿ (ಎಂ.ಡಿ.ಟಿ.) ಕುಷ್ಠ ರೋಗವನ್ನು ಗುಣಪಡಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಾದ ಮಾಲಾ ಮೇವುಂಡಿ, ರೇಣುಕಾ ಪುರದ, ಮೀನಾಕ್ಷಿ ವಡ್ಡರ, ಲಲಿತಾ ಅಂಗಡಿ, ಮಂಜುಳಾ ಆರಿ, ಲಕ್ಷ್ಮಿ ಪೂಜಾರ, ಉಮಾ ಖಾನಾಪೂರ ಇದ್ದರು.
ಕೈ, ಪಾದ ಮತ್ತು ಕಣ್ಣುಗಳಲ್ಲಿ ಬಲಹೀನತೆ, ಅಂಗಾಲುಗಳಲ್ಲಿ ಹುಣ್ಣು, ಕಣ್ಣುಗಳನ್ನು ಪೂರ್ಣವಾಗಿ ಮುಚ್ಚಲು ಆಗದಿರುವುದು ಇವು ಕುಷ್ಠರೋಗದ ಲಕ್ಷಣಗಳಾಗಿರಬಹುದು. ಕುಷ್ಠರೋಗವು ಯಾವುದೇ ಶಾಪದಿಂದ ಬರುವುದಲ್ಲ. ಮೈಕ್ರೋಬ್ಯಾಕ್ಟಿರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗ. ಇದಕ್ಕೆ ಬಹುವಿದ ಔಷಧಿಯನ್ನು ನೀಡುವ ಮೂಲಕ ಗುಣಮುಖಗೊಳಿಸಲಾಗುವುದು. ಯಾರೂ ಭಯಪಡುವ ಅಗತ್ಯ ಇಲ್ಲ ಎಂದು ಶಿದ್ದಪ್ಪ ಎನ್.ಲಿಂಗದಾಳ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಿದರು.