ಮೈಸೂರು:- ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಮೊದಲು ಈ ಕೆಲಸ ಮಾಡಿ ಬಳಿಕ ದಸರಾ ಉದ್ಘಾಟಿಸಲಿ ಎಂದು ಯದುವೀರ್ ಒಡೆಯರ್ ಆಗ್ರಹಿಸಿದರು.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಬಾನು ಮುಷ್ತಾಕ್ ಅವರು ಕನ್ನಡಾಂಬೆ ಕುರಿತ ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಡಬೇಕು ಎಂದು ಯದುವೀರ್ ಒತ್ತಾಯಿಸಿದ್ದಾರೆ. ಸ್ಪಷ್ಟೀಕರಣ ಕೊಡದಿದ್ದರೆ ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ನನ್ನ ವಿರೋಧ ಇದೆ. ಸರ್ಕಾರ ಅವರನ್ನು ಆಯ್ಕೆ ಮಾಡಿದಾಗ ನಾನು ಸ್ವಾಗತಿಸಿದ್ದೆ. ಅವರ ಹಳೇ ಭಾಷಣ ನಂತರ ನೋಡಿದ್ದೇನೆ. ಆ ಭಾಷಣಕ್ಕೆ ಸ್ಪಷ್ಟೀಕರಣ ಬೇಕು. ಸ್ಪಷ್ಟೀಕರಣ ಕೊಡಲಿ ಅಥವಾ ಹೇಳಿಕೆಯನ್ನು ವಾಪಸ್ ಪಡೆಯಲಿ. ಎರಡು ಮಾಡದಿದ್ದರೆ ನನ್ನ ವಿರೋಧ ಇದೆ ಎಂದು ಯದುವೀರ್ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ನಿರ್ಧಾರವೇ ನಮ್ಮ ನಿರ್ಧಾರ. ಪಕ್ಷಕ್ಕೆ ವಿರುದ್ಧ ನಿಲುವು ನನ್ನದಲ್ಲ. ಭುವನೇಶ್ವರಿ ಕುರಿತ ಬಾನು ಮುಷ್ತಾಕ್ ಹೇಳಿಕೆಯಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ಅದನ್ನು ಮುಷ್ತಾಕ್ ಅರ್ಥ ಮಾಡಿಕೊಳ್ಳಬೇಕು. ಅವರ ಧರ್ಮದ ಆಚರಣೆ ಬಗ್ಗೆ ನಾನು ಮಾತನಾಡುವುದಿಲ್ಲ. ನಮ್ಮ ಧರ್ಮದಲ್ಲಂತು ಮೂರ್ತಿ ಪೂಜೆ ಶ್ರೇಷ್ಠವಾದದ್ದು. ಅವರು ಚಾಮುಂಡಿ ಮಾತೆಯನ್ನು ಗೌರವಿಸಿ ಇಲ್ಲಿಗೆ ಬರಬೇಕು. ಭಕ್ತಿಯಿಂದ ದೇವರನ್ನ ಪೂಜಿಸಬೇಕು. ಇದಕ್ಕೂ ಮೊದಲು ತಮ್ಮ ಹಳೆಯ ಹೇಳಿಕೆಗೆ ಸ್ಪಷ್ಟೀಕರಣ ಕೊಡಬೇಕು ಎಂದಿದ್ದಾರೆ.