ವಿಜಯಸಾಕ್ಷಿ ಸುದ್ದಿ, ಗದಗ: 12ನೇ ಶತಮಾನದಲ್ಲಿ ಸಾಮಾಜಿಕ, ವೈಚಾರಿಕ ಕ್ರಾಂತಿ ಮಾಡಿದ ಬಸವಣ್ಣನವರ ವಚನ ಸಾಹಿತ್ಯವನ್ನು ನಾವಿಂದು ಭಾಷಣದ ವಸ್ತುವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಬದಲಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತಂದುಕೊಳ್ಳಲು ಮುಂದಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ರವಿವಾರ ಗದುಗಿನ ರಾಜೀವ ಗಾಂಧಿ ನಗರದ ಈಶ್ವರ ಬಡಾವಣೆಯ ಶ್ರೀ ಈಶ್ವರ ಸಮುದಾಯ ಭವನ ಹಾಗೂ ಶ್ರೀ ಈಶ್ವರ ಸೇವಾ ಟ್ರಸ್ಟ್ ನ ಉದ್ಘಾಟಿಸಿ, ಕೋಡಿಕೊಪ್ಪದ ಹಠಯೋಗಿ ಶ್ರೀ ವೀರಪ್ಪಜ್ಜನವರ ಜೀವನ ದರ್ಶನ ಪ್ರವಚನ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಸಮಾರಂಭದ ಸಾನ್ನಿಧ್ಯವನ್ನು ಅಣ್ಣಿಗೇರಿ ದಾಸೋಹಮಠದ ಪೂಜ್ಯ ಸದ್ಗುರು ಡಾ. ಶಿವಕುಮಾರ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ನಗರಸಭೆಯ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ವಹಿಸಿದ್ದರು.
ಕರ್ನಾಟಕ ವಾಣಿಜ್ಯರತ್ನ ಪ್ರಶಸ್ತಿ ಪುರಸ್ಕೃತ ಶರಣಬಸಪ್ಪ ಗುಡಿಮನಿ, ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತ ಚಂದ್ರು ಬಾಳಿಹಳ್ಳಿಮಠ, ಗಣ್ಯರಾದ ರಮೇಶ ದಿನ್ನಿ, ಎಚ್.ಎನ್. ಚಿಗರಿ, ಸುಮಿತ್ರಾ ಭಜಂತ್ರಿ, ಕೆ.ಎಚ್. ಚಟ್ಟಿ, ಈರಣ್ಣ ಮುದಗಲ್ಲ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಪಾಲ್ಗೊಂಡಿದ್ದರು.
ಟ್ರಸ್ಟ್ ಕಾರ್ಯದರ್ಶಿ ಕೆ.ಬಿ. ಕಂಬಳಿ ಸ್ವಾಗತಿಸಿದರು, ಅಧ್ಯಕ್ಷ ಎಂ.ಜಿ. ಸಂತೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಟ್ರಸ್ಟ್ ಗೌರವಾಧ್ಯಕ್ಷ ಚನ್ನಬಸಪ್ಪ ಅಕ್ಕಿ, ಸಂಘಟನಾ ಕಾರ್ಯದರ್ಶಿ ಚನ್ನಮ್ಮ ಸಂಶಿ ಉಪಸ್ಥಿತರಿದ್ದರು. ಪ್ರವಚನಕಾರರಾದ ಎಸ್.ಬಿ. ದೊಡ್ಡಣ್ಣವರ 13ನೇ ವರ್ಷದ ಶ್ರಾವಣ ಮಾಸದ ಪ್ರವಚನ ಸಂಪನ್ನಗೊಳಿಸಿದರು. ರತ್ನಾ ಮಂಟೂರಮಠ, ಮೋಹನ ಮೇರವಾಡೆ ಹಾಗೂ ಶಿವಶಂಕರ ದೊಡ್ಡಮನಿ ಅವರಿಂದ ಸಂಗೀತ ಜರುಗಿತು. ಮಂಜುಳಾ ಅಕ್ಕಿ ನಿರೂಪಿಸಿ ವಂದಿಸಿದರು.
ಆಧ್ಯಾತ್ಮಿಕ ಚಿಂತನ, ಧಾರ್ಮಿಕ ಕಾರ್ಯಕ್ರಮಗಳು ಜನರ ಬದುಕಿನಲ್ಲಿ ಸುಧಾರಣೆ ತರುವಂತಾಗಬೇಕು. ಅಂದಾಗ ಅದಕ್ಕೆ ಮಹತ್ವ ಬರುವುದು. ಮಹಿಳಾ ಸಮುದಾಯ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಯ್ದುಕೊಳ್ಳುವ ಮೂಲಕ ಸತ್ಸಂಗಳಿಂದ ಸಮಾಜದಲ್ಲಿ ಧಾರ್ಮಿಕ ಮನೋಭಾವನೆಯನ್ನು ಸ್ಪುರಿಸಿ ಸಮಾಜ ಸನ್ಮಾರ್ಗದೆಡೆಗೆ ಮುನ್ನಡೆಸುವಲ್ಲಿ ಕಾರಣರಾಗಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.