ಬೆಂಗಳೂರು: ಜಿಬಿಎ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಮೈತ್ರಿಯಾಗಿ ಸ್ಪರ್ಧಿಸುವ ಆಕಾಂಕ್ಷೆ ನಮ್ಮದಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ H. D. ದೇವೇಗೌಡ ತಿಳಿಸಿದ್ದಾರೆ.
ನಗರದ ಜೆಪಿ ಭವನದಲ್ಲಿ ಮಾತನಾಡಿದ ಅವರು, ನಾವು ಎನ್‌ಡಿಎ ಭಾಗವಾಗಿದ್ದೇವೆ. ಜಿಬಿಎ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಿಜೆಪಿ–ಜೆಡಿಎಸ್ ಒಟ್ಟಾಗಿ ಎದುರಿಸಬೇಕು ಎನ್ನುವುದು ನಮ್ಮ ಆಸೆ. ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದರು.
ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದೆ. ಹೀಗಾಗಿ ಬಿಜೆಪಿ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ, ಅವರ ಭಾವನೆ ತಿಳಿದ ಬಳಿಕವೇ ನಾವು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ದೇವೇಗೌಡ ಹೇಳಿದರು.
ಸಂಸತ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವ ನಿರ್ಧಾರ ಈಗಾಗಲೇ ಇದೆ. ಆದರೆ ಜಿಬಿಎ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸೀಟುಗಳು ಕಡಿಮೆ ಇರುವುದರಿಂದ ಹಂಚಿಕೆ ವಿಚಾರ ಸಂಕೀರ್ಣವಾಗಬಹುದು. ಆದರೂ ಮೈತ್ರಿಯಾಗಿ ಹೋಗಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿ ಬಿಜೆಪಿ ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಅವರು ಮರಳಿ ಬಂದ ನಂತರ ಅಂತಿಮ ರೂಪುರೇಷೆ ತೀರ್ಮಾನಿಸಲಾಗುತ್ತದೆ ಎಂದು ದೇವೇಗೌಡ ಹೇಳಿದರು.



