
ವಿಜಯಸಾಕ್ಷಿ ಸುದ್ದಿ, ಗದಗ: ಸಾಮರ್ಥ್ಯ ಎನ್ನುವುದು ಓರ್ವ ವ್ಯಕ್ತಿಯ ಒಂದು ಸನ್ನಿವೇಶದಲ್ಲಿ ಪರಿಣಾಮಕಾರಿಯಾಗಿ ವರ್ತಿಸಲು ಅನುವು ಮಾಡಿಕೊಡುವ ಸಂಬಂಧಿತ ಜಾಣ್ಮೆ, ಬದ್ಧತೆಗಳು ಜ್ಞಾನ ಹಾಗೂ ಕೌಶಲ್ಯಗಳ ಗುಚ್ಛವಾಗಿದ್ದು, ಮಕ್ಕಳು ಮೌಲ್ಯಯುತ ಸಾಮರ್ಥ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಶರಣೆ ಚಂಪಾ ಪಾಟೀಲ ಹೇಳಿದರು.
ಅವರು ಗದುಗಿನ ಆದರ್ಶ ನಗರದ ಸರ್ಕಾರಿ ಶಾಲೆ ನಂ. 9ರಲ್ಲಿ ಗದಗ ಜಿಲ್ಲಾ ಶರಣೆ ಅಕ್ಕಮಹಾದೇವಿ ಕದಳಿಶ್ರೀ ಮಹಿಳಾ ವೇದಿಕೆಯಿಂದ ಶ್ರಾವಣ ಮಾಸದ ಅಂಗವಾಗಿ ಜರುಗಿದ ಅಮೃತ ಭೋಜನ ಜ್ಞಾನ ಸಿಂಚನ ಮಾಲಿಕೆ-6ರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ಭೋಜನ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸ್ಪಷ್ಟ ಓದು, ಶುದ್ಧ ಬರಹದಲ್ಲಿ ಮೊದಲು ಪರಿಣಿತಿ ಹೊಂದಬೇಕು. ಮನೆ ಹಾಗೂ ಶಾಲೆಯಲ್ಲಿ ಸಂತಸದಾಯಕ ಕ್ಷಣಗಳನ್ನು ಮಕ್ಕಳು ಅನುಭವಿಸಬೇಕು. ವಿದ್ಯಾರ್ಥಿ ಜೀವನವು ಬಂಗಾರದ ಜೀವನವಾಗಿದ್ದು, ಮೌಲ್ಯಗಳನ್ನು ಮನದಲ್ಲಿ ತುಂಬಿಕೊAಡು ಮುನ್ನಡೆಯಬೇಕು ಎಂದರು.
ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದ ಚಿಂತಕಿ ಮಧು ಕರಿಬಿಷ್ಠಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಉನ್ನತ ಅರಿವಿನ ಪ್ರಗತಿಯನ್ನು ಹೊಂದಬೇಕು. ಸಮಾನತೆ, ಗುಣಾತ್ಮಕ ಹಾಗೂ ನಮ್ರತೆಯಂತಹ ವಿಚಾರಗಳನ್ನು ಮನಸ್ಸಿನಲ್ಲಿ ಹೊಂದಿ ಓದುವ ಹಾಗೂ ಬರೆಯುವ, ಓದಿದ್ದನ್ನು ನೆನಪಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕವಿತಾ ದಂಡಿನ, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಂಘ- ಸಂಸ್ಥೆಗಳು ಕೈ ಜೋಡಿಸಿರುವುದು ಶ್ಲಾಘನೀಯವಾಗಿದ್ದು, ಮಕ್ಕಳ ಕಲಿಕೆಗೆ ಇದು ಸಹಕಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯೆ ತಾರಾ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಗಳು ಮಕ್ಕಳಿಗೆ ನಮ್ಮತನದ ಅರಿವಿನ ಜೊತೆಗೆ ಜೀವನದ ಪಾಠ ಕಲಿಸುತ್ತದೆ. ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿ. ಶ್ರಾವಣ ಮಾಸದ ವಿಶೇಷ ಭೋಜನದೊಂದಿಗೆ ಕದಳಿಶ್ರೀ ವೇದಿಕೆ ಪ್ರತಿ ವರ್ಷ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವುದು ಪ್ರೇರಣಾದಾಯಕ ಎಂದರು. ಮಕ್ಕಳಿಂದ ವಚನ ಪಠಣ ನಡೆಯಿತು. ಕೆ.ಎಂ. ನರಗುಂದ ಸ್ವಾಗತಿಸಿ ವಂದಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಜೈಂಟ್ಸ್ ಗ್ರುಪ್ ಆಫ್ ಸಖಿ-ಸಹೇಲಿ ಸಂಘಟನೆಯ ಗದಗ ಜಿಲ್ಲಾ ಅಧ್ಯಕ್ಷೆ ಸುಮಾ ಪಾಟೀಲ ಮಾತನಾಡಿ, ಇದು ವೈಜ್ಞಾನಿಕ ಯುಗವಾಗಿದ್ದು, ಮಕ್ಕಳು ಕಲಿಕೆಯಲ್ಲಿ ಹೊಸ- ಹೊಸ ಅವಿಷ್ಕಾರಗಳನ್ನು ಅಳವಡಿಸಿಕೊಂಡು ವೈಜ್ಞಾನಿಕ ಮನೋಭಾವದೊಂದಿಗೆ ಮುನ್ನಡೆಯಬೇಕು. ಓದು ನಿರಂತರ ಕ್ರಿಯೆಯಾಗಿದ್ದು, ಮಕ್ಕಳು ವಿಶೇಷ ಆಸಕ್ತಿಯಿಂದ ಓದುವುದನ್ನು ರೂಢಿಸಿಕೊಳ್ಳಬೇಕು ಎಂದರು.