HomeGadag Newsಕಾಂಗ್ರೆಸ್ ಸಂವಿಧಾನಬದ್ಧ ಆಡಳಿತ ನಡೆಸಲಿ

ಕಾಂಗ್ರೆಸ್ ಸಂವಿಧಾನಬದ್ಧ ಆಡಳಿತ ನಡೆಸಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿ ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ನಗರದ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಕಾಲ್ನಡಿಗೆಯಲ್ಲಿ ತಹಸೀಲ್ದಾರ ಕಚೇರಿಗೆ ತೆರಳಿ, ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ವಿ.ಆರ್. ಗೋವಿಂದಗೌಡ್ರ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕಳೆದ 2 ವರ್ಷಗಳಿಂದ ಜನರಿಗೆ ಉತ್ತಮ ಮತ್ತು ಕ್ರಿಯಾಶೀಲ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಲಂಚಗುಳಿತನ, ಭ್ರಷ್ಟಾಚಾರ ಹೆಚ್ಚುತ್ತಿದ್ದು, ಸ್ವಜನಪಕ್ಷಪಾತ ತುಂಬಿ ತುಳುಕುತ್ತಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಮತ್ತು ಮುಖಂಡರುಗಳೇ ರಾಜ್ಯ ಸರ್ಕಾರದ ಮತ್ತು ಸಚಿವರುಗಳ ವಿರುದ್ಧ ಬಹಿರಂಗವಾಗಿ ದಾಖಲೆಗಳೊಂದಿಗೆ ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ ಎಂದರು.

ವಸತಿ ಇಲಾಖೆಯು ರಾಜ್ಯದಲ್ಲಿನ ಅತ್ಯಂತ ಹಿಂದುಳಿದ, ಬಡತನದ ಕುಟುಂಬಗಳ ನಿವೇಶನ ಹಾಗೂ ವಸತಿ ರಹಿತ ನೈಜ ಪಲಾನುಭವಿಗಳಿಗೆ ಮೀಸಲಾಗಿರುವ ವಸತಿ ಯೋಜನೆಗಳನ್ನು ಲಂಚ ನೀಡುವವರಿಗೆ ಮಾತ್ರ ನೀಡುತ್ತಿದ್ದು, ಇಲಾಖೆಯು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ಈಗಾಗಲೇ ಪತ್ರಿಕಾ ಮತ್ತು ದೃಶ್ಯಮಾಧ್ಯಮಗಳು ಸಾಕಷ್ಟು ವರದಿ ಮಾಡಿವೆ. ಇದಲ್ಲದೆ ರಾಜ್ಯ ಸರ್ಕಾರ ಇದುವರೆಗೂ ರಾಜ್ಯದ ಜನತೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಕೆರೆ-ಕಟ್ಟೆಗಳ ಪುನಶ್ಚೇತನ, ಒಳಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಮುಂತಾದವುಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಮನೆಗಳ ಹಂಚಿಕೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿರುವುದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರೇ ನೇರವಾಗಿ ವಸತಿ ಸಚಿವ ಜಮೀರ್ ಅಹಮದ್ ವಿರುದ್ಧ ಅಪಾದನೆ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು, ರಾಜ್ಯ ಸರ್ಕಾರ ಕಳೆದ 2 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ಜನರನ್ನು ವಂಚಿಸುತ್ತಿರುವುದಾಗಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಹೊತ್ತಿರುವ ಜಮೀರ್ ಅಹಮದ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅತೀವ ಭ್ರಷ್ಟಾಚಾರ, ಆಡಳಿತ ವೈಫಲ್ಯದಲ್ಲಿ ತೊಡಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ರಾಜ್ಯಪಾಲರು ತರಾಟೆಗೆ ತೆಗೆದುಕೊಂಡು ಸೂಕ್ತ ರೀತಿಯಲ್ಲಿ ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ರಾಜ್ಯಾದ್ಯಂತ ಜೆಡಿಎಸ್‌ನಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಗುತ್ತಿಗೆದಾರರ ಬಾಕಿ ಹಣ ಪಾವತಿ ಮಾಡುವಲ್ಲಿಯೂ ಸಹ ವಿಳಂಬ ಮಾಡುತ್ತಾ ಬಂದಿದ್ದು, ಬಡವರ ಹಾಗೂ ರೈತ ವಿರೋಧಿ ಸರ್ಕಾರವಾಗಿ ಮಾರ್ಪಟ್ಟಿದೆ. ಪರಿಶಿಷ್ಟರಿಗೆ ಮೀಸಲಾಗಿರುವ ಹಣದಲ್ಲಿಯೂ ತಾರತಮ್ಯವೆಸಗುತ್ತಿದ್ದು, ಆ ವರ್ಗದ ಜನರಿಗೆ ಅನ್ಯಾಯ ಮಾಡುತ್ತಿದೆ. ಕೇವಲ ತುಷ್ಟೀಕರಣ ರಾಜಕಾರಣ ಮಾಡುತ್ತ ರಾಜ್ಯದ ಜನರಿಗೆ ಘೋರ ಅನ್ಯಾಯವೆಸಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!