HomeGadag Newsಸಹಕಾರಿ ಸಂಘಗಳು ರಾಜಕೀಯ ಬದಿಗಿಟ್ಟು ಬೆಳೆಯುವಂತಾಗಲಿ: ಸಚಿವ ಎಚ್.ಕೆ. ಪಾಟೀಲ

ಸಹಕಾರಿ ಸಂಘಗಳು ರಾಜಕೀಯ ಬದಿಗಿಟ್ಟು ಬೆಳೆಯುವಂತಾಗಲಿ: ಸಚಿವ ಎಚ್.ಕೆ. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುವ ಮೂಲಕ ಕೃಷಿ ಹಾಗೂ ಕೃಷಿ ಉಪ ಕಸಬುಗಳಿಗೆ ಸಹಕಾರಿ ಸಂಘಗಳ ಮೂಲಕ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ವಿತರಿಸುತ್ತಿದ್ದು, ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಗ್ರಾಮದಲ್ಲಿ ಸಹಕಾರಿ ಸಂಘಗಳ ಬೆಳವಣಿಗೆಯಿಂದ ಗ್ರಾಮೀಣ ಜನರ ಜೀವನ ಹಸನಾಗುವುದು ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ಗದಗ ತಾಲೂಕಿನ ಮುಳಗುಂದ ಸಮೀಪದ ಸೊರಟೂರು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ 500 ಮೆಟ್ರಿಕ್ ಟನ್ ಸಾಮರ್ಥ್ಯದ ಗೋಡಾನ್ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಸಚಿವರು ಮಾತನಾಡಿದರು.

ಗ್ರಾಮದಲ್ಲಿನ ಸಹಕಾರಿ ಸಂಘಗಳು ರಾಜಕೀಯ ಹೊರತುಪಡಿಸಿ ಸ್ಪರ್ಧಾತ್ಮಕ ಮನೋಭಾವದಿಂದ ಬೆಳೆಯುವಂತಾಗಬೇಕು. ಅಂದಾಗ ಮಾತ್ರ ಸಹಕಾರಿ ಚಳುವಳಿಗೆ ಬಲ ಬಂದಂತಾಗುತ್ತದೆ ಎಂದರು.

ರೈತರು ಹಾಗೂ ಬಡ ಕೃಷಿಕರು ಹೆಚ್ಚಿನ ಬಡ್ಡಿಯಲ್ಲಿ ಸಾಲವನ್ನು ಪಡೆದು ಕೃಷಿ ಮಾಡುವುದು ಇಂದಿನ ದಿನಮಾನಗಳಲ್ಲಿ ಲಾಭದಾಯಕವಲ್ಲ. ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಬಡವರ ಪರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಆ ಎಲ್ಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಸೊರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ನಾಲ್ಕು ಸಹಕಾರಿ ಸಂಘಗಳಿಗೆ ಸೌಲಭ್ಯ ಕಲ್ಪಿಸಲಾಗುವುದು. ಶತಮಾನ ಪೂರೈಸಿರುವ ಸೊರಟೂರು ಸಹಕಾರಿ ಸಂಘ ಮಲ್ಲಪ್ಪ ಕಲ್ಲಗುಡಿ ಅವರ ನೇತೃತ್ವದಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸುತ್ತಿದ್ದು, ಇನ್ನಷ್ಟು ಬೆಳವಣಿಗೆ ಹೊಂದಬೇಕು ಎಂದರು.

ಮುಖಂಡರಾದ ಭದ್ರೇಶ ಕುಸುಲಾಪೂರ ಮಾತನಾಡಿ, ಗ್ರಾಮೀಣ ಸಹಕಾರಿ ಸಂಘಗಳ ಬೆಳವಣಿಗೆಗೆ ಸಚಿವ ಎಚ್.ಕೆ. ಪಾಟೀಲರ ಸಹಾಯದಿಂದ ಎಲ್ಲ ಸಂಘಗಳು ವಿವಿಧ ಸೌಲಭ್ಯಗಳನ್ನು ರೈತರಿಗೆ ನೀಡುತ್ತಿದ್ದು, ಸೊರಟೂರಿನ ಒಟ್ಟು ನಾಲ್ಕು ಸಹಕಾರಿ ಸಂಘಗಳು ಸ್ಥಾಪನೆಯಾಗಿವೆ. ಆ ಸಂಘಗಳು ಬೆಳವಣಿಗೆ ಹೊಂದಲು ಅನುದಾನವನ್ನು ಒದಗಿಸಬೇಕು ಎಂದರು.

ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸೊರಟೂರು ಸಹಕಾರಿ ಸಂಘದ ಅಧ್ಯಕ್ಷ ಮಲ್ಲಪ್ಪ ಕಲ್ಲಗುಡಿ ಮಾತನಾಡಿ, ಸದ್ಯ 47 ಲಕ್ಷ ರೂ ವಿಶೇಷ ಅನುದಾನದಡಿಯಲ್ಲಿ 500 ಮೆಟ್ರಿಕ್ ಟನ್ ಸಾಮರ್ಥ್ಯದ ಗೋಡಾನ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ. ಮುಂದಿನ ದಿನಗಳಲ್ಲಿ 1 ಕೋಟಿ ರೂಪಾಯಿ ನೆಪೆಡ್ ಸಂಸ್ಥೆಯ ವಿಶೇಷ ಅನುದಾನದಡಿಯಲ್ಲಿ ದೊಡ್ಡ ಪ್ರಮಾಣದ ಗೋಡಾನ್ ನಿರ್ಮಾಣದ ಗುರಿ ಹೊಂದಲಾಗಿದೆ. ಗದಗ ತಾಲೂಕಿನ ಎಲ್ಲ ಸಹಕಾರಿ ಸಂಘಗಳು ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಚಿವ ಎಚ್.ಕೆ. ಪಾಟೀಲ ಹಾಗೂ ಡಿ.ಆರ್. ಪಾಟೀಲರ ಮಾರ್ಗದರ್ಶನದಲ್ಲಿ ಸಹಕಾರಿ ಸಂಘಗಳು ಜನೋಪಯೋಗಿ ಕೆಲಸ ಮಾಡುತ್ತಿವೆ ಎಂದರು.

ಈ ಸಂದರ್ಭದಲ್ಲಿ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಸಿದ್ದು ಪಾಟೀಲ, ಪ್ರಮೋದ ಇನಾಮದಾರ, ಸಹಕಾರಿ ಸಂಘದ ಉಪಾಧ್ಯಕ್ಷರಾದ ಪರಸಪ್ಪ ಮಲ್ಲಾರಿ, ಫಕೀರಪ್ಪ ಮಟ್ಟಿ, ಪರಶುರಾಮ ಹೂಗಾರ, ರಾಮಣ್ಣ ತಳವಾರ, ಮಹಾಂತೇಶ್ ಹಳ್ಳಿ, ಮುರುಗೇಶ್ ಕುಸುಲಾಪೂರ, ಚನ್ನಪ್ಪ ಕುಸುಲಾಪೂರ, ಮೆಹಬೂಬಸಾಬ ಬಾಬುಖಾನವರ, ನೀಲವ್ವ ಪಾಟೀಲ, ಚೆನ್ನವ್ವ ತಳವಾರ, ಬಸವರಾಜ ಗಾಣಿಗೇರ, ಶರೀಫಸಾಬ ಅತ್ತಿಕಟ್ಟಿ, ವೀರೇಶ ಬೋಳ್ನವರ, ಮಂಜು ಗದುಗಿನ, ತಿರಕಪ್ಪ ಬೋಳ್ನವರ, ವೆಂಕನಗೌಡ ಪಾಟೀಲ, ಮಾನಪ್ಪ ಲಮಾಣಿ, ಮೇಲಗಿರಿಗೌಡ ಪಾಟೀಲ, ಜಯಶ್ರೀ ಬಂಕಾಪುರ, ಮೆಹಬೂಬಸಾಬ ಯಕಲಾಸಪೂರ, ಶಿವಮೂರ್ತಿ ಕರಿಗೌಡ್ರ, ರಾಮಣ್ಣ ಶಲಿಯಪ್ಪನವರ, ಅಡಿವೆಪ್ಪ ಕನ್ನೂರ, ಮಹದೇವಪ್ಪ ಹಡಪದ ಮುಂತಾದವರು ಇದ್ದರು.

ಕೆಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಪ್ಪ ಕಲ್ಲಗುಡಿ ಮಾತನಾಡಿ, ಧಾರವಾಡದ ಕೆಸಿಸಿ ಬ್ಯಾಂಕ್ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ ಸಚಿವರಾದ ಎಚ್.ಕೆ. ಪಾಟೀಲ ಹಾಗೂ ಡಿ.ಆರ್. ಪಾಟೀಲರ ವಿಶೇಷ ಕಾಳಜಿಯಿಂದ ಪಟ್ಟಣದ ಅರ್ಬನ್ ಬ್ಯಾಂಕ್ ಫೆಡರೇಷನ್ ವತಿಯಿಂದ 48 ಕೋಟಿ ರೂಗಳ ಠೇವಣಿಯನ್ನು ಇಡುವ ಮೂಲಕ ಧಾರವಾಡ ಕೆಸಿಸಿ ಬ್ಯಾಂಕ್ ಪುನಶ್ಚೇತನಗೊಳಿಸುವಲ್ಲಿ ಸಹಾಯ ಮಾಡಿದ್ದರು. ಇಂದು ಧಾರವಾಡ ಕೆಸಿಸಿ ಬ್ಯಾಂಕ್ ಇಷ್ಟು ಎತ್ತರದಲ್ಲಿ ಬೆಳೆಯಲು ಹಾಗೂ ಏಷ್ಯಾ ಖಂಡದಲ್ಲಿ ಮೊದಲು ಸ್ಥಾಪನೆಯಾದ ಕಣಗಿನಹಾಳ ಸಹಕಾರಿ ಸಂಘ ಪುನಶ್ಚೇತನಗೊಳ್ಳಲು ಎಚ್.ಕೆ. ಪಾಟೀಲರು ಮಾಡಿದ ಸಹಾಯ ಮರೆಯಲು ಸಾಧ್ಯವಿಲ್ಲ ಎಂದರು.

ರಾಜ್ಯದ ತಲಾ ಆದಾಯದಲ್ಲಿ ದಕ್ಷಿಣ ಕರ್ನಾಟಕ ಮುಂದಿದ್ದು, ಉತ್ತರ ಕರ್ನಾಟಕ ಅತ್ಯಂತ ಹಿಂದಿದೆ. ಗದಗ ಜಿಲ್ಲೆಯಲ್ಲಿ ಪ್ರತಿ ವ್ಯಕ್ತಿಯ ತಲಾ ಆದಾಯ 1 ಲಕ್ಷ 94 ಸಾವಿರ ರೂ ಇದೆ. ನಾವು ಅವರಂತೆ ತಲಾ ಆದಾಯ ಹೆಚ್ಚಿಸಲು ಗ್ರಾಮೀಣ ಭಾಗದಲ್ಲಿ ರೈತರು ಹೆಚ್ಚು ಹೈನೋದ್ಯಮವನ್ನು ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಸೊರಟೂರಿನ 4 ಸಹಕಾರಿ ಸಂಘಗಳು ಎರಡು ವರ್ಷದಲ್ಲಿ 500 ಜನರಿಗೆ ಹೈನುಗಾರಿಕೆ ಕೈಗೊಳ್ಳಲು ಸಾಲ ಸೌಲಭ್ಯ ನೀಡಿದೆ. ಸುಧಾರಿತ ಹೈನುಗಾರಿಕೆ ಕೈಗೊಳ್ಳಲು ಸಹಕಾರಿ ಸಂಘಗಳು ರಚನಾತ್ಮಕ ಕೆಲಸ ಮಾಡಬೇಕು ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!