ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಂಡ್ಯದಲ್ಲಿ ಡಿಸೆಂಬರ್ 20ರಿಂದ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ, ಇನ್ಪೊಸಿಸ್ ಮುಖ್ಯಸ್ಥೆ ಹಾಗೂ ರಾಜ್ಯಸಭಾ ಸದಸ್ಯೆಯಾಗಿರುವ ಡಾ.ಸುಧಾ ನಾರಾಯಣ ಮೂರ್ತಿ ಅವರನ್ನು ಆಯ್ಕೆ ಮಾಡಬೇಕು ಎಂದು ಮಕ್ಕಳ ಸಾಹಿತಿ ಪೂರ್ಣಾಜಿ ಖರಾಟೆ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ, ಮಕ್ಕಳ ಸಾಹಿತಿ ನಾಗರಾಜ ಹಣಗಿ, ಬಂಡಾಯ ಸಾಹಿತಿ ಸಿ.ಜಿ. ಹಿರೇಮಠ ಅವರು ಕಸಾಪ ರಾಜ್ಯಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಮಂಗಳವಾರ ಹೇಳಿಕೆ ನೀಡಿರುವ ಅವರು, ಹತ್ತು ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಹಿರಿಮೆ-ಗರಿಮೆ ಮೂಲಕ ಕನ್ನಡದ ಕೀರ್ತಿಯನ್ನು ದೇಶದ ಉದ್ದಗಲಕ್ಕೂ ಪಸರಿಸಿದ ಕೀರ್ತಿ ಸುಧಾಮೂರ್ತಿಯವರಿಗೆ ಸಲ್ಲುತ್ತದೆ. ಅಲ್ಲದೆ 2010ರಲ್ಲಿ ಮಹಿಳಾ ಹಿರಿಯ ಸಾಹಿತಿ ಗೀತಾ ನಾಗಭೂಷಣ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವದನ್ನು ಹೊರತುಪಡಿಸಿದರೆ ನಂತರ ಯಾವುದೇ ಮಹಿಳಾ ಸಾಹಿತಿಗಳಿಗೆ ಅವಕಾಶ ದೊರಕಿಲ್ಲ.
ಈ ನಿಟ್ಟಿನಲ್ಲಿ ಮೂಲತಃ ಉತ್ತರ ಕರ್ನಾಟಕದವರಾಗಿರುವ ಡಾ.ಸುಧಾಮೂರ್ತಿಯವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದಲ್ಲಿ ಹೆಚ್ಚು ಸೂಕ್ತವಾಗುವದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.