ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಶುಕ್ರವಾರ ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಫಲಾನುಭವಿಗಳ ಕುಂದುಕೊರತೆ ಸಭೆಯು ಸಮಿತಿಯ ತಾಲೂಕಾಧ್ಯಕ್ಷ ನಾಗರಾಜ ಮಡಿವಾಳರ ಅಧ್ಯಕ್ಷತೆಯಲ್ಲಿ ಜರುಗಿತು. ಅನುಷ್ಠಾನ ಸಮಿತಿಯ ಇಲಾಖೆಗಳ ಅಧಿಕಾರಿಗಳು ತಾವು ಸಾಧಿಸಿದ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು.
ಬಸ್ ನಿಲ್ದಾಣದ ಒಳಗೆ ಎಲ್ಲ ಬಸ್‌ಗಳು ಬಂದು ಹೋಗಬೇಕು. ನಿಲ್ದಾಣದ ಒಳಗಡೆ ಸಿಸಿ ರಸ್ತೆ ನಿರ್ಮಿಸಬೇಕು ಮತ್ತು ಲೈಟ್ ವ್ಯವಸ್ಥೆ ಮಾಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ರಾಜ್ಯ ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿ ಯೋಜನೆ ಬಡವರ ಜೀವನ ಮಟ್ಟವನ್ನು ಮೇಲ್ಪಂಕ್ತಿಗೇರಿಸಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅರ್ಹ ಫಲಾನುಭವಿಗಳು ವಂಚಿತರಾಗಬಾರದು. ಯೋಜನೆಗಳನ್ನು ಬಡವರ ಮನೆಗೆ ತಲುಪಿಸುವ ಕಾರ್ಯವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಎಲ್ಲರಿಗೂ ಗ್ಯಾರಂಟಿ ಯೋಜನೆಯ ಲಾಭ ದೊರಕಬೇಕು ಎಂಬ ಉದ್ದೇಶದಿಂದ ಸಮಿತಿ ವತಿಯಿಂದ ಗ್ರಾಮ ಸಭೆ ನಡೆಸುತ್ತಿದ್ದೇವೆ.
ಗ್ರಾಮಗಳಿಗೆ ತೆರಳಿ ಅಲ್ಲಿನ ಫಲಾನುಭವಿಗಳ ಸಮಸ್ಯೆಗಳ ಕುರಿತು ಅರಿತುಕೊಂಡು ಪರಿಹರಿಸುವ ಕೆಲಸ ಮಾಡಲಾಗುತ್ತಿದೆ. ಸೂರಣಗಿ ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1,880 ಫಲಾನುಭವಿಗಳು ಇದ್ದು, ತಿಂಗಳಿಗೆ ಅಂದಾಜು 38 ಲಕ್ಷ ರೂಪಾಯಿ ಯೋಜನೆಯಡಿ ಬರುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರಣ್ಣ ಶೀರನಹಳ್ಳಿ, ಕೋಟೆಪ್ಪ ವರ್ದಿ, ವಿಜಯಣ್ಣ ಹಳ್ಳಿ, ರಂಜಾನ್ ನದಾಫ್, ಶಶಿಕಲಾ ಬಡಿಗೇರ, ಹಸನಸಾಬ್ ಜಂಗ್ಲಿ, ರಮೇಶ ಬಾರಕಿ, ಖಾದರಸಾಬ್ ರಿತ್ತಿ, ಧರ್ಮರ, ಪಿಡಿಒ ಆರ್.ಎಂ. ರೋಣದ, ಕಾರ್ಯದರ್ಶಿ ಎಸ್.ಎಫ್. ಹಳ್ಯಾಳ ಇದ್ದರು.
12 ಫಲಾನುಭವಿಗಳು ಜಿಎಸ್‌ಟಿ ಸಲ್ಲಿಸಿದ್ದು, ಇದರಿಂದಾಗಿ ಅವರಿಗೆ ಹಣ ಬರುತ್ತಿಲ್ಲ. ತಾಂತ್ರಿಕ ಕಾರಣಗಳಿಂದಾಗಿ 9 ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರುತ್ತಿಲ್ಲ. ಈ ಕುರಿತು ಇರುವ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಿ ಅವರಿಗೂ ಹಣ ಬರುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ ನಾಗರಾಜ ಮಡಿವಾಳರ, ಯೋಜನೆಗಳ ಅನುಷ್ಠಾನ ಅಧಿಕಾರಿಗಳು ತಾಲೂಕಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಎಲ್ಲರಿಗೂ ಯೋಜನೆಗಳ ಲಾಭ ದಕ್ಕುತ್ತಿದೆ ಎಂದು ಹೇಳಿದರು.


