ಪ್ರಜಾಪ್ರಭುತ್ವ ಎಂಬ ಆಡಳಿತ ಪದ್ಧತಿಯನ್ನು ಅಳವಡಿಸಿಕೊಂಡ ನಮಗೆ ಚುನಾವಣೆ ಎಂಬುದು ಹಬ್ಬವಲ್ಲ.
ಬದಲಾಗಿ ದೇಶದ ಚುಕ್ಕಾಣೆಯನ್ನು ಯಾರ ಕೈಗೆ ನೀಡಬೇಕು ಎಂಬುದನ್ನು ನಿರ್ಧರಿಸುವ ಮಹತ್ತರ ದಿನ.
ದುರ್ದೈವದ ಸಂಗತಿ ಎಂದರೆ, ನಿರ್ಧಾರ ತಗೆದುಕೊಳ್ಳುವ ಈ ದಿನದಂದು ಸುಶಿಕ್ಷಿತರೆನಿಸಿಕೊಂಡವರೇ ಈ ಮಹತ್ಕಾರ್ಯದಿಂದ ದೂರ ಉಳಿಯುತ್ತಿರುವದು. ಎಲ್ಲಿಯವರೆಗೆ ಸುಶಿಕ್ಷಿತರು ಕಡ್ಡಾಯವಾಗಿ ಮತ ಚಲಾಯಿಸುವುದಿಲ್ಲವೋ, ಅಲ್ಲಿಯವರೆಗೆ ನಿಜವಾದ ಪ್ರಭುವಿನ ಆಯ್ಕೆ ಅಸಾಧ್ಯ. ಸಜ್ಜನನಾರು, ದುರ್ಜನನಾರು ಎಂಬ ವಿವೇಚನೆಯನ್ನು ಮಾಡಲಾರದವನ ಮತದಿಂದ ಚುನಾಯಿತನಾದ ವ್ಯಕ್ತಿಯಿಂದ ದೇಶ ಉದ್ದಾರವಾಗಲು ಹೇಗೆ ಸಾಧ್ಯ? ನಿಜ ಹೇಳಬೇಕೆಂದರೆ, ದೇಶ ಹಾಳಾಗುತ್ತಿರುವುದು ದುರ್ಜನರ ಅಟ್ಡಹಾಸದಿಂದಲ್ಲ, ಬದಲಾಗಿ ಸಜ್ಜನರ ಗಾಢ ಮೌನದಿಂದ.
ಬ್ರಿಟೀಷರು ನಮ್ಮ ದೇಶ ತೊರೆದು 75 ವರ್ಷ ಗತಿಸಿದರೂ ಬ್ರಿಟಿಷತ್ವ ಮಾತ್ರ ಹಾಗೇಯೇ ಬಳವಳಿಯಾಗಿ ನಮ್ಮ ರಕ್ತದಲ್ಲಿ ಸೇರಿಹೋಗಿದೆ. ಅಂದು ಬ್ರೀಟಿಷರ ಗುಲಾಮರಾಗಿದ್ದೆವು, ಇಂದು ರಾಜಕಾರಣಿಗಳ ಗುಲಾಮರಾಗಿದ್ದೇವೆ. ಗುಲಾಮಗಿರಿಯಿಂದ ಮುಕ್ತಿ ದೊರೆಯಬೇಕಾದರೆ ಹಣ, ಹೆಂಡದಂತಹ ಚಿಲ್ಲರೆ ಆಮಿಷಕ್ಕೆ ಬಲಿಯಾಗದೇ ಸೂಕ್ತ ಸಜ್ಜನ ವ್ಯಕ್ತಿಯನ್ನು ಆಯ್ಕೆ ಮಾಡಿ ಕಳುಹಿಸುವ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುವ ದಿನವೇ ಚುನಾವಣೆ.

ದುರ್ದೈವದ ಸಂಗತಿ ಎಂದರೆ ಬುದ್ಧಿ, ತಿಳುವಳಿಕೆ ಇರುವ ಮತದಾರ ಮತದಾನ ಮಾಡದೇ ಇರುವುದು ಹಾಗೂ ಬುದ್ಧಿ-ತಿಳುವಳಿಕೆ ಇರದ ಮತದಾರ ಕಡ್ಡಾಯವಾಗಿ ಮತದಾನ ಮಾಡುತ್ತಿರುವುದು. ಇದರ ಪರಿಣಾಮದಿಂದಾಗಿಯೇ IAS,IPS,KAS ನಂತಹ ಪದವಿ ಪಡೆದರೂ ಸಹ ಹೆಬ್ಬಟ್ಟಿನ ರಾಜಕಾರಣಿ ಎದುರು ತಲೆ ತಗ್ಗಿಸಿ ನಿಂತುಕೊಳ್ಳಬೇಕಾದ ಪರಿಸ್ಥಿತಿ ಉದ್ಭವವಾಗಿದ್ದು.
ಆದ್ದರಿಂದ ಸುಶಿಕ್ಷಿತರು, ಪ್ರಜ್ಞಾವಂತರು ಮತದಾನ ದಿನದಂದು ರಜಾ ದಿನವೆಂದು ಭಾವಿಸದೇ, ಮೋಜು-ಮಸ್ತಿಯಲ್ಲಿ ಕಾಲ ಕಳೆಯದೇ ಕಡ್ಡಾಯವಾಗಿ ಮತ ಹಾಕಬೇಕು ಹಾಗೂ ಮತ ಹಾಕಿಸಬೇಕು. ನೂರು ಪ್ರತಿಶತ ಮತದಾನವಾದಾಗ ಮಾತ್ರ ನಿಜವಾದ ಸಮಾಜಮುಖಿ ಜನನಾಯಕ ದೊರೆಯಬಲ್ಲ.
-ಮಂಜುನಾಥ ಚನ್ನಪ್ಪನವರ.
ಬೆಟಗೇರಿ-ಗದಗ.
Advertisement