ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಐಎಂಎ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿ ಜನಮುಖಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ರಾಜ್ಯ ಐಎಂಎ ಅಧ್ಯಕ್ಷ ಟಿ. ವೀರಭದ್ರಯ್ಯ ಅಭಿಪ್ರಾಯಪಟ್ಟರು.
ಅವರು ರವಿವಾರ ಗದಗಿನ ಐಎಂಎ ರಕ್ತಭಂಡಾರದಲ್ಲಿ ಏರ್ಪಡಿಸಿದ್ದ ಸಾರ್ವಜನಿಕರಿಗೆ ಆರೋಗ್ಯದ ಸಂದೇಶ ಸಾರುವ ಎಲ್ಇಡಿ ಫಲಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಗದಗ ಐಎಂಎಗೆ ತನ್ನದೇ ಆದ ಭವ್ಯ ಇತಿಹಾಸವಿದೆ. ರಾಜ್ಯ ಐಎಂಎಗೆ ಬಹು ದೊಡ್ಡ ಕೊಡುಗೆಯನ್ನೂ ನೀಡಿರುವ ಗದಗ ಶಾಖೆಯು ನಡೆದು ಬಂದ ದಾರಿ ತುಂಬಾ ರೋಚಕವಾಗಿದ್ದು, ಹಲವಾರು ರಚನಾತ್ಮಕ ಕಾರ್ಯ ಯೋಜನೆಗಳ ಮೂಲಕ ಇಲ್ಲಿನ ಹಿರಿ-ಕಿರಿಯ ವೈದ್ಯರು ವೈದ್ಯ ಲೋಕಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ಗದಗ ಐಎಂಎ 2026ನೇ ವರ್ಷವನ್ನು ಶತಮಾನೋತ್ಸವದ ವರ್ಷವನ್ನಾಗಿ ಆಚರಿಸುತ್ತಿದ್ದು, ಈ ಅವಧಿಯಲ್ಲಿ ಜನರ ಆರೋಗ್ಯವನ್ನು ಸುಧಾರಿಸುವ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಸಲಹೆ ನೀಡಿದರು.
ಗದಗಿನ ಮಧ್ಯವರ್ತಿ ಸ್ಥಳದಲ್ಲಿರುವ ಐಎಂಎ ರಕ್ತಭಂಡಾರದ ಆವರಣದಲ್ಲಿ ಅಳವಡಿಸಿರುವ ಈ ಎಲ್ಇಡಿ ಫಲಕವು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವಂತಾಗಲಿ. ಇಲ್ಲಿ ಬಿತ್ತರಗೊಳ್ಳುವ ಸಂದೇಶಗಳಲ್ಲಿ ಕೆಲವು ಸಂದೇಶಗಳು ಜನತೆಯ ಬದುಕಿನಲ್ಲಿ ಆರೋಗ್ಯ ಜಾಗೃತಿ ಮೂಡಿಸಿದಲ್ಲಿ ಯೋಜನೆ ಸಾರ್ಥಕತೆ ಪಡೆದುಕೊಳ್ಳುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಡಾ. ರಾಜಶೇಖರ ಪವಾಡಶೆಟ್ಟರ ಸಂದರ್ಭೋಚಿತವಾಗಿ ಮಾತನಾಡಿದರು. ಐಎಂಎ ಅಧ್ಯಕ್ಷ ಡಾ. ಶ್ರೀಧರ ಕುರಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಡಾ. ಎಸ್.ಆರ್. ನಾಗನೂರ ಉಪಸ್ಥಿತರಿದ್ದರು.



