ವಿಜಯಸಾಕ್ಷಿ ಸುದ್ದಿ, ಧಾರವಾಡ: ಗದಗು ಸಂಗೀತದ ಗದ್ದಿಗೆಯನ್ನಾಗಿ ಮಾಡಿದ, ಪಂಡಿತ ಪಂಚಾಕ್ಷರಿ ಗವಾಯಿಗಳವರ ಕುರಿತಾಗಿ ಹುಬ್ಬಳಿ ಧಾರವಾಡ ಪ್ರದೇಶದಲ್ಲಿ ಯಾವುದೇ ಸ್ಮಾರಕವಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗವಾಯಿಗಳವರ ಹೆಸರಲ್ಲಿ ಅಧ್ಯಯನ ಪೀಠ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಈಡೇರಿಲ್ಲ. ಈಗ ನಾವು ಸ್ಮಾರಕ ಮತ್ತು ಅಧ್ಯಯನ ಪೀಠದೊಂದಿಗೆ ಗದುಗಿನಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಟ್ರಸ್ಟ್ ಸ್ಥಾಪಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಕಲಾವಿಕಾಸ ಪರಿಷತ್ ಸಂಸ್ಥಾಪಕ ಸಿ.ಕೆ.ಹೆಚ್. ಶಾಸ್ತ್ರಿ (ಕಡಣಿ) ಹೇಳಿದರು.
ಅವರು ಕಲಾ ವಿಕಾಸ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ 133ನೇ ಜಯಂತ್ಯುತ್ಸವ, `ಅಮರಸ್ವರ ಸಮಾರೋಹ’ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಕಾಶವಾಣಿ ಧಾರವಾಡ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಬಸು ಬೇವಿನಗಿಡದ, ಹಿರಿಯ ರಂಗ ನಿರ್ದೇಶಕಿ, ಗಾಯಕಿ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ, ಕವಿವಿ ಲಲಿತಕಲಾ ಹಾಗೂ ಸಂಗೀತ ಮಾಹಾವಿದ್ಯಾಲಯ, ಪ್ರಾಧ್ಯಾಪಕ ಡಾ. ಎ.ಎಲ್. ದೇಸಾಯಿ ಭಾಗವಹಿಸಿ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಜೀವನ ಸಾಧನೆ-ಸಂದೇಶ ಕುರಿತಾಗಿ ಮಾತನಾಡಿದರು.
ಬೆಂಗಳೂರಿನ ಡಾ. ಗೋಪಾಲ ಕೆ.ರಾಯಚೂರ, ಧಾರವಾಡದ ಡಾ. ಪರಶುರಾಮ ಕಟ್ಟಿಸಂಗಾವಿ, ಹಳಿಯಾಳದ ಸುಮಾ ಹಡಪದ, ಡಂಬಳದ ಬಸವರಾಜ ಎನ್.ಸಿದ್ದಣ್ಣನವರ, ಜ್ಞಾನಜ್ಯೋತಿ ಕಲಾ ಬಳಗ ಹುಬ್ಬಳ್ಳಿ, ಶ್ರೀ ರಾಜರಾಜೇಶ್ವರಿ ಸಂಗೀತ ಕಲಾ ಪಾಠ ಶಾಲೆ ಇಟ್ಟಿಗಿ, ಸುಸ್ವರ ಸಂಗೀತ ವಿದ್ಯಾ ಸಂಸ್ಥೆ ದಾಂಡೇಲಿ, ಶ್ರೀ ದುರ್ಗಾದೇವಿ ನಾಟ್ಯ ಶಾಲೆ ಹಳಿಯಾಳ ಇವರುಗಳಿಗೆ ‘ಸುವರ್ಣ ಸಿರಿ ಸಮ್ಮಾನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಸವರಾಜ ಹಡಪದ ಸರ್ವರಿಗೂ ಸ್ವಾಗತಿಸಿದರು. ಸುಮಂಗಲಾ ಚಕ್ರಸಾಲಿ ಹಳಿಯಾಳ ನಿರೂಪಿಸಿ ವಂದಿಸಿದರು.
ಬೆಳಿಗ್ಗೆ ‘ಅಮರಸ್ವರ ಸಮಾರೋಹ’ ಉದ್ಘಾಟನೆಯನ್ನು ಖ್ಯಾತ ಹಿಂದೂಸ್ಥಾನಿ ಗಾಯಕ ಡಾ. ಶಾಂತಾರಾಮ ಹೆಗಡೆ ಉದ್ಘಾಟಿಸಿದರು.ಧಾರವಾಡದ ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಸಮಾರಂಭದ ಅಧ್ಯಕ್ಷೀಯ ನುಡಿಗಳನ್ನಾಡಿದರು. ಡಾ. ವೀಣಾ ಬಿರಾದಾರ, ಸಿ.ಕೆ.ಹೆಚ್. ಶಾಸ್ತ್ರಿ (ಕಡಣಿ) ಪ್ರಾಸ್ತಾವಿಕವಾಗಿ ಮಾತನಾಡಿದರು.
ದೇವಿಕಾ ಕೆ.ಜೋಗಿ ಸ್ವಾಗತಿಸಿದರು. ಸ್ವರ ಸಂವಾದಿನ ಸಂಗೀತ ಪಾಠಶಾಲೆಯ ಮಕ್ಕಳು ಪ್ರಾರ್ಥನಾ ಸಂಗೀತ ನಡೆಸಿಕೊಟ್ಟರು. ಐಶ್ವರ್ಯ ಅಮೂಲ್ಯ ಹಡಪದ ಸಹೋದರಿಯರು ಸ್ವಾಗತ ನೃತ್ಯ ಸೇವೆ ಸಲ್ಲಿಸಿದರು. ಪ್ರೊ. ಪಿ.ಆರ್. ನಾಗರಾಳ ನಿರೂಪಿಸಿದರು. ಡಾ. ಎ.ಎಲ್. ದೇಸಾಯಿ ವಂದಿಸಿದರು.
ಇದೇ ಸಂದರ್ಭದಲ್ಲಿ ಖ್ಯಾತ ತಬಲಾ ವಾದಕ ಪಂ. ಶಾಂತಲಿಂಗಪ್ಪ ಹೂಗಾರ (ದೇಸಾಯಿ ಕಲ್ಲೂರ) ಹಾಗೂ ಧಾರವಾಡದ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ, ಶಿರಸಿಯ ಯಕ್ಷ ಕಲಾಸಂಗಮ ಕಲಾ ಪೋಷಕ ಮತ್ತು ಕಲಾ ಶಿಕ್ಷಣ ಸಂಸ್ಥೆಗಳಿಗೆ ಕಲಾ ವಿಕಾಸ ಪರಿಷತ್‌ನ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿ ‘ಗಾನಯೋಗಿ ಪಂಚಾಕ್ಷರಿ ಅನುಗ್ರಹ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.