ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಕ್ಷೇತ್ರದ ಎಲ್ಲ ಶಾಲೆಗಳ ಮೂಲಭೂತ ಸೌಕರ್ಯ ಒದಗಿಸಲು ನಾವು ಸಿದ್ಧ. ಶಾಲೆಗಳ ಫಲಿತಾಂಶ ಸುಧಾರಣೆ ನಮ್ಮೆಲ್ಲರ ಗುರಿಯಾಗಿರಲಿ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಹಿರೇಹಂದಿಗೋಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾ.ಪಂ ಬಿಂಕದಕಟ್ಟಿ, ಎಸ್ಡಿಎಂಸಿ ಹಿರೇಹಂದಿಗೊಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಿರೇಹಂದಿಗೋಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಕೊಠಡಿಗಳ ಉದ್ಘಾಟನೆ, ಅಂಗನವಾಡಿ ಕಟ್ಟಡ ಭೂಮಿ ಪೂಜೆ ಹಾಗೂ ಶ್ರೀ ಶರಣಬಸವೇಶ್ವರ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭ ನೆರವೇರಿಸಿ ಸಚಿವರು ಮಾತನಾಡಿದರು.
ದಿಲ್ಲಿಯಲ್ಲಿರುವ ಸರ್ಕಾರಿ ಶಾಲೆಗಳ ವ್ಯವಸ್ಥೆ ಹಾಗೂ ಫಲಿತಾಂಶ ಸುಧಾರಣೆ ಕುರಿತಂತೆ ಅಧ್ಯಯನಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕಳುಹಿಸಿಕೊಡಲಾಗಿತ್ತು. ಅವರು ಅಧ್ಯಯನ ನಡೆಸಿ ಬಂದು ಸದ್ಯ ಗದಗ ಜಿಲ್ಲೆಯಲ್ಲಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿಲ್ಲಿಯಲ್ಲಿರುವಂತೆ ಶಾಲೆಗಳು ಸುಧಾರಣೆಯಾಗಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನಾವು ಒದಗಿಸಲು ಸಿದ್ಧವಾಗಿದ್ದೇವೆ. ಶಿಕ್ಷಕ ಸಮೂಹ ಫಲಿತಾಂಶ ಸುಧಾರಣೆಗೆ ಮುಂದಾಗಲಿ ಎಂದರು.
ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸಮಾಜದಲ್ಲಿ ಆರ್ಥಿಕ ಸುಧಾರಣೆ ತರಲು ಸಾಧ್ಯವಾಗಿದೆ. ಪಂಚ ಗ್ಯಾರಂಟಿಗಳ ಮೂಲಕ ಆರ್ಥಿಕ ಅಭಿವೃದ್ಧಿಯೊಂದಿಗೆ ಕುಟುಂಬದ ವಾರ್ಷಿಕ ವರಮಾನವೂ ಅಧಿಕವಾಗಿದೆ. ಇದು ಸಹ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಲಿ ಎಂದು ಸಚಿವ ಎಚ್.ಕೆ. ಪಾಟೀಲ ಆಶಿಸಿದರು.
ಇದೇ ಸಂದರ್ಭದಲ್ಲಿ ಸಹಕಾರ ರತ್ನ ಪುರಸ್ಕೃತರಾದ ಧಾರವಾಡ ಕೆಎಂಎಫ್ ನಿರ್ದೇಶಕ ಎಚ್.ಜಿ. ಹಿರೇಗೌಡ್ರು ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಗದಗ ತಾ.ಪಂ ಮಾಜಿ ಅಧ್ಯಕ್ಷರಾದ ರವಿ ಮೂಲಿಮನಿ ಹಾಗೂ ಎಂ.ಐ. ಪಾಟೀಲ, ಬಿಂಕದಕಟ್ಟಿ ಗ್ರಾ.ಪಂ ಅಧ್ಯಕ್ಷೆ ತುಳಸಾ ತಿಮ್ಮನಗೌಡ್ರ, ಉಪಾಧ್ಯಕ್ಷೆ ದ್ಯಾಮವ್ವ ಆರಟ್ಟಿ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಿಂಗಪ್ಪ ತಳವಾರ, ಬಸವರಾಜ್ ಕಡೆಮನಿ, ಎಸ್.ಎನ್. ಬಳ್ಳಾರಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಎಸ್. ಬುರಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಗಳ ತಾಪಸ್ಕರ, ಎಸ್.ಎನ್. ನಡುವಿನಮನಿ, ಶಾಲಾ ಮುಖ್ಯ ಶಿಕ್ಷಕ ಗಂಗಾಧರಗೌಡ ಗೌಡರ, ಜಿ.ಕೆ. ಆದಪ್ಪಗೌಡರ, ಯು.ಬಿ. ಜಕ್ಕನಗೌಡರ ಮುಂತಾದವರು ಉಪಸ್ಥಿತರಿದ್ದರು.



