ಧಾರವಾಡ: ಕೇಂದ್ರದಲ್ಲಿ ಮೋದಿ ಸರ್ಕಾರ ಕೊಟ್ಟ ಭರವಸೆಗಳ ಬಗ್ಗೆ ಜೋಶಿ ಮಾತನಾಡಲಿ ಎಂದು ಸಚಿವ ಸಂತೋಷ್ ಲಾಡ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕೆಗೆ ತಿರುಗೇಟು ಕೊಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿ ಆಗಿದೆ ಅಂತ ಹೇಳುವ ಜೋಶಿ ಅವರು ಮೊದಲು ಕೇಂದ್ರ ಸರ್ಕಾರ ಏನಾಗಿದೆ ಎಂಬುದನ್ನು ಹೇಳಬೇಕು.
ಅವರು ಈ ರಾಜ್ಯದವರಿದ್ದಾರೆ. ಪ್ರತೀಸಾರಿ ರಾಜ್ಯ ಸರ್ಕಾರಕ್ಕೆ ಆಟ್ಯಾಕ್ ಮಾಡಿ ಹೋಗ್ತಾರೆ. ಕೇಂದ್ರ ಸರ್ಕಾರದಿಂದ ಇಷ್ಟು ಬಜೆಟ್ ಮಂಡನೆಯಾಗಿದ್ದು, ಕರ್ನಾಟಕಕ್ಕೆ ಧಾರವಾಡ ಜಿಲ್ಲೆಗೆ ಏನೂ ಅನುದಾನ ತಂದಿದ್ದಾರೆ ಅನ್ನೋದನ್ನು ಚರ್ಚೆ ಮಾಡಲಿ. ಎರಡು ತಿಂಗಳು ದುಡ್ಡು ಹಾಕಿಲ್ಲ ಅಂದ್ರೆ ದಿವಾಳಿ ಆಗಿದೆ ಅಂತ ಹೇಳುವ ಅವರು, ಕೇಂದ್ರ ಸರ್ಕಾರದ ಬಗ್ಗೆ ಚರ್ಚೆ ಮಾಡ್ತಾರಾ ಎಂದು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ, ಯಾರು ದಪ್ಪ ಚರ್ಮದವರು ಅನ್ನೋದು ಜನರಿಗೆ ಗೊತ್ತಾಗುತ್ತಿದೆ. ಕಪ್ಪು ಹಣ ತರಲಾಗುತ್ತದೆ, ದೇಶದ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ 15 ಲಕ್ಷ ಹಣ ಹಾಕಲಾಗುತ್ತದೆ, 100 ಬುಲೆಟ್ ಟ್ರೈನ್ ಬರಲಿವೆ ಅಂತ ನೂರಾರು ಸುಳ್ಳು ಭರವಸೆಗಳನ್ನು ನೀಡಿದ್ದರು. ಕೇವಲ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುವುದು ಸರಿಯಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರ ಕೊಟ್ಟ ಭರವಸೆಗಳ ಬಗ್ಗೆ ಜೋಶಿ ಮಾತನಾಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.