ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಭಾರತ ಧರ್ಮ ಭೂಮಿಯಲ್ಲಿ ಧರ್ಮ ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ಬಹಳಷ್ಟು ಮಹತ್ವದ ಸ್ಥಾನವಿದೆ. ಸಕಲ ಜೀವಾತ್ಮರಿಗೂ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ವಿಶಾಲ ಉತ್ಕೃಷ್ಟ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಹೊಂದಿದೆ. ಈ ನಾಡಿನ ಮಠಗಳು ಸಂಸ್ಕಾರ ಕೊಡುವ, ಸಂಸ್ಕೃತಿ ಕಲಿಸುವ ಆಧ್ಯಾತ್ಮಿಕ ಕೇಂದ್ರಗಳಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ತಾಲೂಕಿನ ಶ್ರೀಮತ್ಕಾಶೀ ಶಾಖಾ ವಿರೂಪಾಪುರ ಕಲಕೇರಿ ಶ್ರೀ ಮುದುಕೇಶ್ವರ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮಾನವ ಜೀವನದ ಶ್ರೇಯಸ್ಸು ಧರ್ಮಾಚರಣೆಯಲ್ಲಿದೆ. ಧರ್ಮದ ದಿಕ್ಸೂಚಿ ಇಲ್ಲದೇ ಇದ್ದರೆ ಮಾನವ ಜೀವನ ವ್ಯರ್ಥ. ಸಂತಸ, ಶಾಂತಿಯ ಬದುಕಿಗೆ ಧರ್ಮ ಪರಿಪಾಲನೆಯ ಅವಶ್ಯಕತೆಯಿದೆ. ಭೌತಿಕ ಸಂಪತ್ತಿನ ಜೊತೆಗೆ ಒಂದಿಷ್ಟಾದರೂ ಶಿವಜ್ಞಾನದ ಅರಿವು ಮತ್ತು ಗುರು ಕಾರುಣ್ಯ ಇರಬೇಕಾಗುತ್ತದೆ. ವೀರಶೈವ ಧರ್ಮದಲ್ಲಿ ಶ್ರೀ ಗುರುವಿಗೆ ಮಹತ್ವದ ಸ್ಥಾನವನ್ನು ಕಲ್ಪಿಸಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ-ಸಿದ್ಧಾಂತಗಳು ಜೀವನದ ವಿಕಾಸಕ್ಕೆ ಅಡಿಪಾಯವಾಗಿವೆ.
ವಿರೂಪಾಪುರ ಕಲಕೇರಿ ಹಿರೇಮಠದ ಮುದುಕೇಶ್ವರ ಶಿವಾಚಾರ್ಯರು ಅತ್ಯಂತ ಮುಗ್ಧರು, ಸರಳ ಜೀವಿಗಳು. ಭಕ್ತರ ಸಹಕಾರದಿಂದ ಶ್ರೀ ಮಠವನ್ನು ಅಭಿವೃದ್ಧಿಪಡಿಸಿದ್ದಾರೆ. ಪಟ್ಟಾಭಿಷಿಕ್ತರಾದ ನೂತನ ಅಭಿನವ ಮುದುಕೇಶ್ವರ ಶಿವಾಚಾರ್ಯರು ಹಿರಿಯರ ಆದರ್ಶ ದಾರಿಯಲ್ಲಿ ಮುನ್ನಡೆದು ಈ ಭಾಗದ ಭಕ್ತರಿಗೆ ಸನ್ಮಾರ್ಗ ದರ್ಶನ ನೀಡುವರೆಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು, ಉಭಯ ಶ್ರೀಗಳಿಗೆ ಸ್ಮರಣಿಕೆ ಮತ್ತು ಫಲಪುಷ್ಪವಿತ್ತು ಶುಭ ಹಾರೈಸಿದರು.
ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಆಶೀರ್ವಚನ ನೀಡಿ, ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಮನುಷ್ಯನಲ್ಲಿ ಭಾವನೆಗಳು ಬೆಳೆಯುತ್ತಿಲ್ಲ. ಸುಖದ ಮೂಲ ಧರ್ಮ ಪರಿಪಾಲನೆಯಲ್ಲಿ ಇದೆ ಎಂಬುದನ್ನು ಯಾರೂ ಮರೆಯಬಾರದು. ಸಂಸ್ಕಾರ, ಸಂಸ್ಕೃತಿಗಳ ಪುನರುತ್ಥಾನ ಈ ನಾಡಿನ ಮಠಗಳಿಂದ ನಿರಂತರ ನಡೆಯುತ್ತಲೇ ಬಂದಿದೆ. ವಿದ್ಯಾ ವಿನಯ ಸಂಪನ್ನರಾದ ಅಭಿನವ ಮುದುಕೇಶ್ವರ ಶಿವಾಚಾರ್ಯರನ್ನು ಪಡೆದ ಇಲ್ಲಿಯ ಜನ ಭಾಗ್ಯವಂತರು. ವೀರಶೈವ ಧರ್ಮದ ಆದರ್ಶ ಚಿಂತನಗಳನ್ನು ಭಕ್ತ ಸಂಕುಲಕ್ಕೆ ಬೋಧಿಸಿ ಸನ್ಮಾರ್ಗಕ್ಕೆ ಕರೆ ತರುವ ಶಕ್ತಿಯನ್ನು ನೂತನ ಶ್ರೀಗಳಿಗೆ ಭಗವಂತ ಕೊಡಲೆಂದು ಆಶಿಸಿ ಆಶೀರ್ವದಿಸಿದರು.
ನೇತೃತ್ವ ವಹಿಸಿದ ಹಿರಿಯ ಪಟ್ಟಾಧ್ಯಕ್ಷರಾದ ಮುದುಕೇಶ್ವರ ಶಿವಾಚಾರ್ಯರು ಮಾತನಾಡಿ, ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ಕಾಯಕದಿಂದಲೇ ಮನುಷ್ಯನಿಗೆ ಕಳಾ ಚೈತನ್ಯ ಪ್ರಾಪ್ತಿಯಾಗುತ್ತದೆ. ಶ್ರೀ ಮಠದ ಅಭಿವೃದ್ಧಿಗಾಗಿ ಸದಾ ಶ್ರಮಿಸಿರುವೆ. ಇದೇ ದಾರಿಯಲ್ಲಿ ನೂತನ ಶ್ರೀಗಳು ಕಾರ್ಯೋನ್ಮುಖರಾಗಿ ಮಾರ್ಗದರ್ಶನ ನೀಡುತ್ತಾರೆ ಎಂದರು.
ಮುಕ್ತಿಮಂದಿರ, ಹುಕ್ಕೇರಿ, ಬನ್ನಿಕೊಪ್ಪ, ಸುಳ್ಳ, ಶಿರಕೋಳ, ಕೊಣಂದೂರು, ಹಿರೇವಡ್ಡಟ್ಟಿ, ಅಂಗೂರು, ಹಂಪಸಾಗರ, ಹಿರೇಮಲ್ಲಕೇರಿ ಮಾನಿಹಳ್ಳಿ, ಮೈನಳ್ಳಿ ಮೊದಲ್ಗೊಂಡು 25ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೀರೇಶ ಕೂಗು, ಚಂದ್ರು ಬಾಳಿಹಳ್ಳಿಮಠ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಶಿವಕುಮಾರಗೌಡ ಪಾಟೀಲ ಸ್ವಾಗತಿಸಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಪಟ್ಟಾಭಿಷಿಕ್ತರಾದ ನೂತನ ಅಭಿನವ ಮುದುಕೇಶ್ವರ ಶಿವಾಚಾರ್ಯರು ಮಾತನಾಡಿ, ಧರ್ಮ ಮಾನವ ಜೀವನದ ಉಸಿರಾಗಬೇಕು. ಅನ್ನ, ನೀರು, ಗಾಳಿ ಮನುಷ್ಯನಿಗೆ ಎಷ್ಟು ಅವಶ್ಯಕವೋ ಅಷ್ಟೇ ಧರ್ಮ ಪಾಲನೆಯ ಅವಶ್ಯಕತೆಯಿದೆ. ವೀರಶೈವ ಧರ್ಮದ ಆದರ್ಶ ಚಿಂತನ ಮತ್ತು ಗುರು ಪರಂಪರೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬರುತ್ತೇವೆ ಎಂದು ಸಂಕಲ್ಪ ತೊಟ್ಟರು.



