ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕಾರಣ ಉತ್ತರ ಕರ್ನಾಟಕದ 14 ಜಿಲ್ಲೆಗಳ ಅಭಿವೃದ್ಧಿ ಶೂನ್ಯವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಗವಾಡದ ಹಿರಿಯ ಶಾಸಕ ರಾಜು ಕಾಗೆ ಉತ್ತರ ಕರ್ನಾಟಕ ರಾಜ್ಯ ರಚನೆಯಾಗಲು ನೀಡಿರುವ ಹೇಳಿಕೆಗೆ ಉತ್ತರ ಕರ್ನಾಟಕದ ಹೋರಾಟಗಾರ ಎಸ್.ಎಸ್. ರಡ್ಡೇರ ಸ್ವಾಗತಿಸಿ ಬೆಂಬಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ 75 ವರ್ಷಗಳಲ್ಲಿ ಉತ್ತರ ಕರ್ನಾಟಕ ಮೂಲಭೂತ ಸೌಲಭ್ಯಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ದಕ್ಷಿಣ ಕರ್ನಾಟಕಕ್ಕಿಂತ ಅಭಿವೃದ್ಧಿಯಲ್ಲಿ ಬಹಳ ಹಿಂದಿದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳು ಬಹಳ ಅಭಿವೃದ್ಧಿ ಹೊಂದಿವೆ. ಅದರಲ್ಲೂ ನೀರಾವರಿ ಕ್ಷೇತ್ರದಲ್ಲಿ ದಕ್ಷಿಣ ಕರ್ನಾಟಕ ಅಭಿವೃದ್ಧಿ ಸಾಧಿಸಿದೆ. ಉತ್ತರ ಕರ್ನಾಟಕದ ಮೂಲ ಉದ್ಯೋಗವಾಗಿರುವ ಕೃಷಿಗೆ ನೀರಾವರಿ ಸಾಧನೆ ಅತ್ಯಂತ ಕಳಪೆಯಾಗಿರುವುದರಿಂದ ರೈತರ ಬದುಕು ಕಠಿಣವಾಗಿದೆ. ಉತ್ತರ ಕರ್ನಾಟಕದ ಯುವಕರು ಸಾಕಷ್ಟು ಜಮೀನು ಹೊಂದಿದ್ದರೂ ನೀರಾವರಿ, ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಕೃಷಿಯಿಂದ ವಿಮುಖರಾಗಿರುತ್ತಿರುವುದು ಬಹಳ ಅಪಾಯಕರ ಬೆಳವಣಿಗೆಯಾಗಿದೆ ಎಂದು ಡಾ. ಎಸ್.ಎಸ್. ರಡ್ಡೇರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.