ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮರಣ ಹೊಂದಿದ ಮೇಲೆ ಸುಟ್ಟರೆ ಬೂದಿಯಾಗಿ, ಹೂತರೆ ಮಣ್ಣಲ್ಲಿ ಮಣ್ಣಾಗುವ ದೇಹ ಮತ್ತೊಬ್ಬರ ಬದುಕಿಗೆ ಆಸರೆಯಾಗಲಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ಅನಕೂಲವಾಗಲಿ ಎಂಬ ಸದುದ್ದೇಶದಿಂದ ಮರಣಾನಂತರ ಸ್ವಯಂಪ್ರೇರಿತವಾಗಿ ದೇಹದಾನ ಮಾಡಲು ಒಪ್ಪಿಕೊಂಡಿದ್ದೇವೆ ಎಂದು ನಿವೃತ್ತ ಶಿಕ್ಷಕ ಪೂರ್ಣಾಜಿ ಖರಾಟೆ ಮತ್ತು ಸಹಚರರು ಹೇಳಿದರು.
ಅವರು ಪಟ್ಟಣದಲ್ಲಿ ಮಂಗಳವಾರ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ದೇಹದಾನ ಸಂಘ-ಅಂಗರಚನಾ ಶಾಸ್ತ್ರ ವಿಭಾಗಕ್ಕೆ ಸ್ವಯಂಪ್ರೇರಿತವಾಗಿ ದೇಹದಾನದ ಪ್ರತಿಜ್ಞೆ ಮಾಡಿರುವ ಪ್ರಮಾಣಪತ್ರವನ್ನು ಪ್ರದರ್ಶಿಸಿ ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ಮನುಷ್ಯನ ದೇಹಗಳ ಅವಶ್ಯಕತೆ ಹೆಚ್ಚಾಗಿ ಕಂಡುಬರುತ್ತಿದೆ. ದೇಹವನ್ನು ವೈದ್ಯಕೀಯ ಜ್ಞಾನಾರ್ಜನೆ ಮತ್ತು ಸಂಶೋಧನೆಗಾಗಿ ಕೊಡಲು ಪ್ರಮಾಣೀಕರಿಸಿದ್ದೇವೆ. ಮರಣಾನಂತರ ಕಿಡ್ನಿ, ಕಣ್ಣು, ಹೃದಯ ಸೇರಿ ಮನುಷ್ಯನ ಕೆಲ ಅಂಗಾಗಳನ್ನು ಅಪಘಾತಕ್ಕೀಡಾದವರು ಮತ್ತು ರೋಗಿಗಳಿಗೆ ಜೋಡಿಸುವುದರಿಂದ ಅಂಥವರ ಬಾಳಿಗೆ ಬೆಳಕಾಗುತ್ತದೆ.
ದೇಹದಾನ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಉದ್ದೇಶವಲ್ಲ. ಬದಲಾಗಿ, ಈ ಬಗ್ಗೆ ಜಾಗೃತಿ ಮತ್ತು ಪ್ರೇರಣೆಯಾಗಬೇಕೆಂಬ ಸದುದ್ದೇಶವಷ್ಟೇ. ನನ್ನ ಜತೆಗೆ ಆತ್ಮೀಯರು, ನಿವೃತ್ತ ಶಿಕ್ಷಕರಾದ ಎನ್.ಆರ್. ಸಾತಪುತೆ ಹಾಗೂ ಬಿ.ಎಸ್. ಈಳಿಗೇರ ಅವರು ಸಹ ಗದಗ ಜಿಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಹಾಗೂ ಡಾ.ವಿರೇಶ ಕರಬಸಪ್ಪ ಹಂಚಿನಾಳ ಅವರ ಸಮ್ಮುಖದಲ್ಲಿ ಸ್ವಯಂ ಪ್ರೇರಿತವಾಗಿ ದೇಹದಾನ ಮಾಡಲು ನಿರ್ಧಾರಿಸಿದ್ದಾರೆ ಎಂದರು.
ಈ ವೇಳೆ ವಿಶ್ವನಾಥ ಖರಾಟೆ ಸೇರಿದಂತೆ ಅನೇಕರು ಇದ್ದರು. ನಿವೃತ್ತ ಶಿಕ್ಷಕತ್ರಯರ ಕಾರ್ಯಕ್ಕೆ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಳ್ಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.