ವಿಜಯಸಾಕ್ಷಿ ಸುದ್ದಿ, ಗದಗ: ದೇಹಾಭಿಮಾನ, ಧನಾಭಿಮಾನ ಶಾಶ್ವತವಲ್ಲ ಎನ್ನುವುದನ್ನು ಅರಿತು ಧರ್ಮಾಭಿಮಾನ ಮತ್ತು ದೇಶಾಭಿಮಾನ ಬೆಳೆಸುವಲ್ಲಿ ಹಿಂದೂ ಮಹಾಗಣಪತಿಯ ಪ್ರೇರಣೆ ಸರ್ವರಲ್ಲಿ ಒಡಮೂಡಲಿ ಎಂದು ಸೂಡಿ ಜುಕ್ತಿಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.
ಅವರು ಮಂಗಳವಾರ ಸಂಜೆ ಗದಗ ನಗರದ ವೀರಶೈವ ಲೈಬ್ರರಿಯ ಬಳಿಯಲ್ಲಿ ಶ್ರೀ ಸುದರ್ಶನಚಕ್ರ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿ ೨೧ ದಿನಗಳ ಕಾಲ ಪೂಜಿಸಲ್ಪಡುವ ಹಿಂದೂ ಮಹಾಗಣಪತಿ ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೀಪ ಜ್ಞಾನದ ಸಂಕೇತವಾಗಿದ್ದು, ನಮ್ಮಲ್ಲಿರುವ ಅಜ್ಞಾನ ಕಳೆದು ಸುಜ್ಞಾನದೆಡೆಗೆ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಭಕ್ತರು ಗಣಪತಿಯ ಗುಣಗಳನ್ನು ತಮ್ಮಲ್ಲಿ ಕಲ್ಪಿಸಿಕೊಳ್ಳುವ ಮೂಲಕ ಬದುಕಿನಲ್ಲಿ ಅಧ್ಯಾತ್ಮಕತೆ ಅಳವಡಿಸಿಕೊಂಡು ಬದಲಾವಣೆ ಕಾಣಬೇಕಿದೆ. ಭಗವಂತನೆಡೆಗೆ ನಮ್ಮ ಒಂದು ಹೆಜ್ಜೆ ಮಾನವ ಬದುಕು ಸಾಕಾರಕ್ಕೆ ಸಹಕಾರಿಯಾಗಲಿದೆ. ನಗರದಲ್ಲಿ ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನೆಯ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯ ಎತ್ತಿ ಹಿಡಿಯುವ ಕಾರ್ಯ ಪ್ರಸಂಶನೀಯವಾಗಿದೆ ಎಂದರು.
ಇಂದು ನಗರದಲ್ಲಿ ನಡೆದ ಲಕ್ಷ ದೀಪೋತ್ಸವ ದೇಶದ ಜನರಲ್ಲಿ ತುಂಬಿರುವ ಅಜ್ಞಾನ ತೊಲಗಿಸಲು ಮತ್ತು ನಾಡಿನ ಸಮೃದ್ಧಿಗೆ ಸಹಕಾರಿಯಾಗಿದ್ದು, ಒಟ್ಟಾರೆ ನಗರದಲ್ಲಿ ಇಂದೆ ಮುಂಬರುವ ದೀಪಗಳ ಹಬ್ಬ ದೀಪಾವಳಿಗೆ ಚಾಲನೆ ದೊರತಂತಾಗಿದ್ದು, ಲಕ್ಷ ದೀಪೋತ್ಸವದ ಬೆಳಕಿನ ಛಾಯೆಗಳು ಸರ್ವರಲ್ಲಿ ಸಮೃದ್ಧಿ, ಸಂಪ್ರೀತಿ ಬೆಳೆಯಲು ಪ್ರೇರಕವಾಗಲಿ ಎಂದರು.
ನಮ್ಮದು ಸಿಂಧೂ ನಾಗರಿಕತೆಯಾಗಿದೆ. ನಮ್ಮ ಸಂಸ್ಕೃತಿ ಮಾತ್ರ ಗಟ್ಟಿಭಾವ ಹೊಂದಿದೆ. ಇತ್ತೀಚೆಗೆ ಇತರೆ ದೇಶಗಳಲ್ಲಿ ಸಂಸ್ಕೃತಿ, ನಾಗರಿಕತೆ ನಾಶವಾಗುತ್ತಿದ್ದು, ದೇಶದ ಪರಂಪರೆ ಬೆಳೆಸುವ ಹೊಣೆಗಾರಿಕೆಯನ್ನು ಧರ್ಮಾಭಿಮಾನಿಗಳು ಹೊರಬೇಕಿದೆ. ಭಾರತ ಮಹಾತ್ಮರು, ಸಾಧು, ಸಂತರ ನಾಡಾಗಿದ್ದು, ಇಲ್ಲಿ ಮಹಾಜ್ಞಾನಿಗಳು, ಮಹಾತ್ಮರು ಜನ್ಮ ತಳೆಯುವ ಮೂಲಕ ಭಾರತ ಭೂಮಿಯನ್ನು ಪವಿತ್ರಗೊಳಿಸಿದ್ದಾರೆ. ದೇವಾನುದೇವತೆಗಳು ಜನ್ಮ ತಳೆದ ಸರ್ವಶ್ರೇಷ್ಠ ಪವಿತ್ರ ಭೂಮಿ ನಮ್ಮದಾಗಿದೆ. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಸರ್ವರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ.
— ಡಾ. ಕೊಟ್ಟೂರು ಶಿವಾಚಾರ್ಯ ಶ್ರೀಗಳು.


