ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಮಾಜದಲ್ಲಿನ ವಿಶೇಷ ಚೇತನ ಮಕ್ಕಳನ್ನು ಗುರುತಿಸಿ ಅವರಿಗೂ ಸಾಮಾನ್ಯ ಮಕ್ಕಳಿಗೆ ದೊರೆಯುವ ಸೌಲಭ್ಯಗಳನ್ನು ಒದಗಿಸಿದಾಗ ಅವರು ಎಲ್ಲರಂತೆ ಸರ್ವ ರಂಗಗಳಲ್ಲಿಯೂ ಪ್ರಗತಿ ಸಾಧಿಸಬಲ್ಲರು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಸ್. ಭಜಂತ್ರಿ ಹೇಳಿದರು.
ಅವರು ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಶಿರಹಟ್ಟಿ ಕಾರ್ಯಾಲಯದ ವತಿಯಿಂದ ಬಿ.ಡಿ. ತಟ್ಟಿ(ಅ)ಶ್ರವಣನ್ಯೂನ್ಯತೆಯುಳ್ಳ ಮಕ್ಕಳ ಶಾಲೆಯಲ್ಲಿ ನಡೆದ ವಿಶೇಷ ಚೇತನರ ಜಾಗೃತಿ, ಅರಿವು ಮೂಡಿಸುವ ಹಾಗೂ ಪರಿಸರ ನಿರ್ಮಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳಿಗೆ ಸರಕಾರದಿಂದ ಸಾಕಷ್ಟು ಸೌಲಭ್ಯಗಳು ದೊರೆಯುತ್ತವೆ. ಅವೆಲ್ಲವುಗಳನ್ನೂ ಪಡೆಯಲು ವಿಕಲತೆಯ ಗುರುತಿನ ಕಾರ್ಡ್ ಮಾಡಿಸುವುದು ಅತ್ಯವಶ್ಯಕ. ಜೊತೆಗೆ ಪಾಲಕರು ಮತ್ತು ಸಮಾಜ ಇಂತಹ ಮಕ್ಕಳಿಗೆ ವಿಶೇಷ ಕಾಳಜಿ ತೋರಿಸಿ, ಗೌರವದಿಂದ ಕಂಡು, ಅವಕಾಶ ಕೊಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ 21 ವಿಕಲತೆಗಳ ಮಾಹಿತಿ ತಿಳಿಸುವ ಪೋಸ್ಟರ್ ಹಾಗೂ ಸರಕಾರದ ಸೌಲಭ್ಯಗಳ ಮಾಹಿತಿ ತಿಳಿಸುವ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌ.ಕಾರ್ಯದರ್ಶಿ ಸೋಮನಾಥ ಮಹಾಜನಶೆಟ್ಟರ ವಹಿಸಿದ್ದರು. ಅತಿಥಿಗಳಾಗಿ ಸಂಸ್ಥೆಯ ಆಡಳಿತಾಧಿಕಾರಿ ಬಿ.ಬಿ. ಹುಬ್ಬಳ್ಳಿ, ಮುಖ್ಯೋಪಾಧ್ಯಾಯೆ ಜಯಶ್ರೀ ಶೆಟ್ಟರ, ಶಿಕ್ಷಕ ಜಿ.ಪಿ. ಪವಾರ, ಪ್ರತಿಮಾ ಮಹಾಜನಶೆಟ್ಟರ, ಎನ್.ಆರ್. ಸಾಥಪುತೆ, ಸಿ.ಆರ್.ಪಿಗಳಾದ ಉಮೇಶ ನೇಕಾರ, ಮುಲ್ಲಾನವರ, ಎಂ.ಆರ್.ಡಬ್ಲ್ಯು ಭಾರತಿ ಉಪಸ್ಥಿತರಿದ್ದರು.
ಯು.ಆರ್. ಡಬ್ಲ್ಯು ಮಂಜುನಾಥ ರಾಮಗಿರಿ, ಬಿ.ಐ.ಈ.ಆರ್.ಟಿಗಳಾದ ಕಲ್ಲಪ್ಪ ಬೇವೂರ, ಎಸ್.ವಿ. ಕೋತಬಾಳ, ಶ್ರೀಶೈಲ ಪೂಜಾರಿ ಹಾಗೂ ಶಾಲೆಯ ಸರ್ವ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಬಿ.ಐ.ಈ.ಆರ್.ಟಿ. ನಾಗರಾಜ ಮಜ್ಜಿಗುಡ್ಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಸಿಬ್ಬಂದಿಗಳಾದ ಸಂಗೀತಾ ವಾಲಿ ಪ್ರಾರ್ಥಿಸಿದರು, ಗೀತಾ ಕೋಡ್ಲಿ ಸ್ವಾಗತಿಸಿದರು, ವಿಜಯಲಕ್ಷ್ಮಿ ಮುಧೋಳ ಕಾರ್ಯಕ್ರಮ ನಿರೂಪಣೆ ಮಾಡಿದರು. ನಿಂಗಪ್ಪ ರೋಣದ ವಂದಿಸಿದರು.