ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಳೆದ ವಾರ ಕೋಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಅಮಾನುಷವಾಗಿದ್ದು, ಇದರಿಂದ ವೈದ್ಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೂಡಲೇ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವದರ ಜೊತೆಗೆ ವೈದ್ಯಕೀಯ ಕಾಲೇಜುಗಳಲ್ಲಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ತಾಲೂಕಾ ವೈದ್ಯರ ಸಂಘದ ಅಧ್ಯಕ್ಷ ಪಿ.ಡಿ. ತೋಟದ ಆಗ್ರಹಿಸಿದರು.
ಅವರು ಶನಿವಾರ ತಾಲೂಕಾ ವೈದ್ಯರ ಸಂಘದ ವತಿಯಿಂದ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಮಾತನಾಡಿ, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವೈದ್ಯರಲ್ಲಿ ಭಯದ ವಾತಾವರಣ ಮೂಡಿಸಿದೆ. ವೈದ್ಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಸರ್ಕಾರಗಳು ಒದಗಿಸಬೇಕು. ಮಹಿಳಾ ವೈದ್ಯರಿಗೆ ಹೆಚ್ಚಿನ ಭದ್ರತೆ ಕೊಡಬೇಕು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ. ಎನ್.ಎಂ. ವಾಲಿ, ಡಾ. ಎಸ್.ಸಿ. ಮಲ್ಲಾಡದ, ಡಾ. ಪ್ರಸನ್ನ ಕುಲಕರ್ಣಿ, ಡಾ. ಎಂ.ಆರ್. ಕಲಿವಾಳಮಠ, ಡಾ. ರಾಜಶೇಖರ ಮೂಲಿಮನಿ, ಡಾ. ಜೆ.ಬಿ. ತುರಕಣ್ಣನವರ, ಡಾ.ಎ.ಬಿ. ಪಾಟೀಲ್, ಡಾ. ಎ.ಎಚ್. ಅಮರಶೆಟ್ಟಿ, ಡಾ. ಎಂ.ಆರ್. ಗೋಣೆಪ್ಪನವರ, ಡಾ.ಮಹೇಶ ಗದಗಿನಮಠ, ಡಾ. ಬಿ.ಜಿ. ಅಂಗಡಿ, ಡಾ. ಎನ್.ಎಸ್. ಕಳ್ಳಿಮನಿ, ಡಾ. ಆಶಾ ತೋಟದ ಸೇರಿದಂತೆ ತಾಲೂಕಿನ ವೈದ್ಯರ ಸಂಘ, ಐಎಂಎ, ಆಯುಷ್ ವೈದ್ಯರ ಸಂಘ, ಡೆಂಟಲ್ ವೈದ್ಯರ ಸಂಘಗಳ ಸದಸ್ಯರು ಇದ್ದರು.