ಸಂಗ್ರಹಿಸಿದ ಶುಲ್ಕ ಬೀದಿ ಬದಿ ವ್ಯಾಪಾರಸ್ಥರಿಗೇ ತಲುಪಲಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದ ಕಾನೂನು ಹಾಗೂ ಮಾರ್ಗಸೂಚಿಯನ್ವಯ ಬೀದಿ ಬದಿ ವ್ಯಾಪಾರಸ್ಥರಿಂದ ಸಂಗ್ರಹಿಸುವ ಶುಲ್ಕ ನಿಗದಿತವಾಗಿರಲಿ. ಸಂಗ್ರಹಿಸಿದ ಶುಲ್ಕ ಪುನಃ ಬೀದಿ ಬದಿ ವ್ಯಾಪಾರಸ್ಥರಿಗೆ ಸದ್ಭಳಕೆಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಗದಗ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಗದಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.

ಬೀದಿ ಬದಿ ವ್ಯಾಪಾರಸ್ಥರಿಂದ ಸಂಗ್ರಹಿಸಿದ ಶುಲ್ಕ ಮತ್ತು ಹಣದ ಕ್ರೋಢೀಕರಣ ಸದ್ಭಳಕೆಯಾಗುತ್ತಿಲ್ಲವೆಂದು ದೂರುಗಳು ಬರುತ್ತಿವೆ. ಸರ್ಕಾರದ ಮಾರ್ಗಸೂಚಿಗಳನ್ವಯ ಸಂಗ್ರಹಿಸಿದ ಶುಲ್ಕದ ಮೊತ್ತ ಸರಿಯಾಗಿ ಅರ್ಹರಿಗೆ ಸದ್ಬಳಕೆಯಾಗಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ತಮ್ಮ ಸಮಸ್ಯೆಗಳ ಕುರಿತು ಹಾಗೂ ಶುಲ್ಕ ಸಂಗ್ರಹಣೆ, ಸಮಿತಿ ರಚಿಸುವ ಕುರಿತು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ. ಪಾಟೀಲ, ಜಿಲ್ಲಾಧಿಕಾರಿಗಳ ಮೂಲಕ ಬೀದಿಬದಿ ವ್ಯಾಪಾರಸ್ಥರ ಶುಲ್ಕ ಸಂಗ್ರಹಣೆ ಹಾಗೂ ಸಂಗ್ರಹಿಸಿದ ಶುಲ್ಕ ಸದ್ಬಳಕೆ ಮಾಡುವ ಕುರಿತಂತೆ ಸರ್ಕಾರದ ಸಂಪೂರ್ಣ ಮಾರ್ಗಸೂಚಿಗಳೊಂದಿಗೆ ಜಿಲ್ಲೆಯ ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ತಿಳಿಸುವ ಸೂಚನೆ ನೀಡಿದರು. ಅಲ್ಲದೇ ಪಟ್ಟಣ ಮೇಲುಸ್ತುವಾರಿ ಸಮಿತಿ ಸಭೆಯನ್ನು 2-3 ದಿನಗಳೊಳಗಾಗಿ, ಕುಂದುಕೊರತೆ ಸಮಿತಿ ಮತ್ತು ಟಿವಿಸಿ ಸಮಿತಿ ಸಭೆಯನ್ನು 5 ದಿನಗಳೊಳಗಾಗಿ ರಚಿಸುವಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸಚಿವರು ಸೂಚಿಸಿದರು.

ಬೀದಿ ಬದಿ ವ್ಯಾಪಾರಸ್ಥರೂ ಸಹ ಗೌರವಯುತವಾಗಿ ಸಮಾಜದಲ್ಲಿ ಎಲ್ಲರಂತೆ ಜೀವನ ಸಾಗಿಸಬೇಕು. ಇದಕ್ಕಾಗಿ ಈಗಾಗಲೇ ಗದಗಿನಲ್ಲಿ ವ್ಯಾಪಾರಸ್ಥರಿಗೆ ತಳ್ಳುವ ಹೈಟೆಕ್ ಗಾಡಿ, ನೆರಳಿಗಾಗಿ ಕೊಡೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡಲಾಗಿದೆ. ಇವುಗಳ ಸದ್ಬಳಕೆಯೊಂದಿಗೆ ಆರ್ಥಿಕವಾಗಿ ಬೀದಿ ಬದಿ ವ್ಯಾಪಾರಸ್ಥರು ಸಹ ಸಬಲರಾಗಬೇಕು ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಸ್ಥರಿಂದ ಸಂಗ್ರಹಿಸಿದ ಶುಲ್ಕ ಸದ್ಬಳಕೆಯಾಗದೇ ಸರ್ಕಾರಕ್ಕೆ ಮರಳಿ ಹೋಗಿದೆ ಎಂದು ವ್ಯಾಪಾರಸ್ಥರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ವಿಷಯದ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ನಿಜವಾಗಿಯೂ ಅನುದಾನ ಅಪವ್ಯಯ ಅಥವಾ ಮರಳಿ ಹೋಗಿದ್ದರೆ ಅದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ವಹಿಸುವಂತೆ ಸೂಚಿಸಿದರು. ಅಲ್ಲದೇ ಸರ್ಕಾರಕ್ಕೆ ಮರಳಿ ಹೋಗಿರುವ ಅನುದಾನವನ್ನು ಪುನಃ ತರಲು ಕ್ರಮ ಕೈಗೊಳ್ಳಲು ತಿಳಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಶೋಕ ಮಂದಾಲಿ, ಪ್ರಭು ಬುರಬುರೆ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಅಪರ ಜಿಲ್ಲಾಧಿಕಾರಿ ಡಾ. ದುರುಗೇಶ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟ್ಟೂರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಬಸವರಾಜ ಮಲ್ಲೂರ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಬೀದಿ ಬದಿ ವ್ಯಾಪಾರಸ್ಥರ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.

ಬೀದಿ ಬದಿ ವ್ಯಾಪಾರಸ್ಥರು ಹಾಗೂ ಸಂಘದ ಪದಾಧಿಕಾರಿಗಳು ಸರ್ಕಾರಿ ಕಚೇರಿಗೆ ಅಧಿಕಾರಿಗಳನ್ನು ಭೇಟಿ ಮಾಡಲು ಬಂದಾಗ ಅಧಿಕಾರಿಗಳು ಅವರೊಂದಿಗೆ ಸಂಯಮದಿಂ, ಗೌರವಯುತವಾಗಿ ನಡೆದುಕೊಳ್ಳಬೇಕು. ಯಾವುದೇ ತರಹದ ದರ್ಪ, ಕಠೋರ ವರ್ತನೆ ಸಹಿಸಲಾಗದು. ಬೀದಿ ಬದಿ ವ್ಯಾಪಾರಸ್ಥರಿಗಾಗಿಯೇ ಕಾನೂನು ರೂಪಿಸಲಾಗಿದೆ. ಕಾನೂನು ರಾಜ್ಯದಲ್ಲಿ ಜಾರಿಯಾಗಲು ವಿಳಂಬವಾಗಿರಬಹುದು. ಆದರೆ ಗದಗ ಜಿಲ್ಲೆಯಲ್ಲಿ ಕಾನೂನು ಅನುಷ್ಠಾನ ಆಗಬೇಕು. ಆಗಸ್ಟ್ 15ರಿಂದ ಕಾನೂನು ಸರಿಯಾಗಿ ಸಮರ್ಪಕವಾಗಿ ಅನುಷ್ಠಾನವಾಗಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.


Spread the love

LEAVE A REPLY

Please enter your comment!
Please enter your name here