ಕರ್ನಾಟಕ ರಾಜ್ಯ ಸರಕಾರಿ ಸಂಘವು ಶತಮಾನ ಪೂರೈಸಿದ ಅತಿದೊಡ್ಡ ಸಂಘಟನೆಯಾಗಿದೆ. ರಾಜ್ಯ ಸರಕಾರಿ ನೌಕರರ ವಿವಿಧ ನೂರಾರು ವೃಂದ ಸಂಘಟನೆಗಳಿಗೆ ಮಾತೃಸ್ಥಾನದಲ್ಲಿದ್ದು, ಪೋಷಿಸಿ ಬೆಳೆಸಿದೆ. 105 ವರ್ಷಗಳ ಇತಿಹಾಸದಲ್ಲಿ ಸಂಘವು ಕೆಲವು ಐತಿಹಾಸಿಕ ನಿರ್ಣಯಗಳ ಮೂಲಕ ನೌಕರರ ಹಿತರಕ್ಷಣೆ ಕಾಪಾಡಿರುವದನ್ನು ಕಾಣುತ್ತೇವೆ. ನೌಕರ ಮತ್ತು ನೌಕರ ಕುಟುಂಬದವರ ಆರ್ಥಿಕ, ಸಾಮಾಜಿಕ, ಸೇವಾಭದ್ರತೆ, ಕಾಲ ಕಾಲಕ್ಕೆ ವೇತನ ಪರಿಷ್ಕರಣೆ, ತುಟ್ಟಿಭತ್ಯೆ, ಮನೆ ಬಾಡಿಗೆ, ವೈದ್ಯಕೀಯ ಭತ್ಯೆ ಸೌಲಭ್ಯಗಳನ್ನು ಸಾಂಘಿಕ ಹೋರಾಟದಿಂದ ಕೊಡಿಸುವ ಮೂಲಕ ನೌಕರರ ಬದುಕನ್ನು ಹಸನಾಗಿಸಿದೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಸಿ.ಎಸ್. ಷಡಾಕ್ಷರಿ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು 24*7 ಕಾರ್ಯನಿರ್ವಹಿಸುವ ಮೂಲಕ ಸಂಘಕ್ಕೆ ಒಂದು ಹೊಸ ಆಯಾಮ ತಂದು ಕೊಟ್ಟರು. ಸೀಮಿತ ಕ್ಷೇತ್ರಕ್ಕೆ ತನ್ನ ಕಾರ್ಯವ್ಯಾಪ್ತಿಯೊಂದಿಗೆ ಅಪರಿಚಿತವಾಗಿದ್ದ ಸಂಘಟನೆಯನ್ನು ರಾಜ್ಯದ ಮೂಲೆ ಮೂಲೆಗಳಿಗೆ ಪ್ರವಾಸ ಕೈಗೊಂಡು ಎಲ್ಲ ಸ್ತರದ ನೌಕರರನ್ನು ಭೇಟಿ ಮಾಡಿ ಜಿಲ್ಲಾ ಮಟ್ಟದಲ್ಲಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಹಬ್ಬ, ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರದಂತಹ ವಿನೂತನ ಕಾರ್ಯಕ್ರಮಗಳ ಮುಖೇನ ರಾಜ್ಯದ ಉದ್ದಗಲಕ್ಕೂ ಸಂಘದ ವ್ಯಾಪ್ತಿಯನ್ನು ವಿಸ್ತರಿಸಿದರು.
ಜಿಲ್ಲಾ, ತಾಲೂಕು, ಹೋಬಳಿ ಹಂತದಲ್ಲಿ ಜರುಗುತ್ತಿರುವ ಸಂಘದ ಕಾರ್ಯಕ್ರಮಕ್ಕೆ ತಮ್ಮ ಒತ್ತಡದ ಕಾರ್ಯಗಳ ನಡುವೆಯೂ ಆಗಮಿಸಿ ಸಂಘಟನೆಗೊಂದು ಬಲವಾದ ಶಕ್ತಿಯನ್ನು ತರುವ ಮೂಲಕ ಅಪರೂಪದ ಅಧ್ಯಕ್ಷರಾಗಿ ರಾಜ್ಯದ ಲಕ್ಷಾಂತರ ನೌಕರರ ಮನದಾಳದಲ್ಲಿ ಜನಮಾನಸರಾಗಿ ನಮ್ಮೆಲ್ಲರ ಅಭಿಮಾನದ ಹೆಮ್ಮೆಯ ಅಧ್ಯಕ್ಷರಾಗಿದ್ದಾರೆ ಷಡಾಕ್ಷರಿಯವರು. ಸದಾ ಪಾದರಸದಂತೆ ಕೆಲಸದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ವೈಯಕ್ತಿಕವಾದ ಹಸನಾದ ಬದುಕಿನ ಮೂಲಕ ನಮಗೆಲ್ಲಾ ರೋಲ್ ಮಾಡೆಲ್ ಆಗಿದ್ದಾರೆ. ಒಬ್ಬ ದಕ್ಷ ಮತ್ತು ಸಮರ್ಥ ನಾಯಕತ್ವದಲ್ಲಿ ಸಂಘ ಮುನ್ನಡೆದರೆ ಏನೆಲ್ಲಾ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
• ಶೇಕಡಾ 27.50ರಷ್ಟು ಫಿಟ್‌ಮಂಟ್‌ನೊಂದಿಗೆ 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿರುವದು.
• ಸರಕಾರಿ ನೌಕರರ ಮೇಲೆ ಅನಾಮಧೇಯ ದೂರುಗಳು ಬಂದಲ್ಲಿ ತನಿಖೆ ಅಗತ್ಯವಿಲ್ಲವೆಂಬ ಸರಕಾರದ ಆದೇಶ.
• ರಾಜ್ಯ ಸರಕಾರಿ ನೌಕರರ ಹಬ್ಬದ ಮುಂಗಡ (ಎಫ್‌ಎ) ಮೊತ್ತವನ್ನು 10 ಸಾವಿರದಿಂದ 25 ಸಾವಿರ ರೂಗಳಿಗೆ ಹೆಚ್ಚಳ.
• ಮಹಿಳಾ ಸರಕಾರಿ ನೌಕರರಿಗೆ ಮಕ್ಕಳ ಆರೈಕೆಗಾಗಿ 6 ತಿಂಗಳ ಶಿಶುಪಾಲನಾ ರಜೆಯ ಆದೇಶ.
• ರಾಜ್ಯದ ಮಹಿಳಾ ಸರಕಾರಿ ನೌಕರರಿಗೆ ಋತುಚಕ್ರ ರಜೆ ಮಂಜೂರು.
• ಪ್ರತಿವರ್ಷ ಏಪ್ರಿಲ್ 21ರಂದು ರಾಜ್ಯ ಸರಕಾರಿ ನೌಕರರ ದಿನಾಚರಣೆ ಆದೇಶ.
• ಸರಕಾರಿ ನೌಕರರು ಹಾಗೂ ಕುಟುಂಬದ ಅವಲಂಬಿತ ಸದಸ್ಯರಿಗೆ ಸಂಪೂರ್ಣ ನಗದುರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್‌ಎಸ್) ಜಾರಿ.
• ಸರಕಾರಿ ನೌಕರರಿಗೆ ಡಯಾಲಿಸಿಸ್ ಚಿಕಿತ್ಸೆಗಾಗಿ 6 ತಿಂಗಳ ವಿಶೇಷ ಸಾಂದರ್ಭಿಕ ರಜೆ ಆದೇಶ.
• ಸರಕಾರಿ ನೌಕರರು ಸ್ಥಿರಾಸ್ಥಿ ಮತ್ತು ಚರಾಸ್ಥಿಯನ್ನು ಸರಕಾರದ ಅನುಮತಿ ಇಲ್ಲದೆ ಖರೀದಿಸಲು ಆದೇಶ.
• ಸ್ಯಾಲರಿ ಪ್ಯಾಕೇಜ್ ಯೋಜನೆಯಡಿಯಲ್ಲಿ ಅಪಘಾತದಲ್ಲಿ ಮರಣ ಹೊಂದಿದ ನೌಕರರ ಕುಟುಂಬಕ್ಕೆ 1 ಕೋಟಿ ರೂ ವಿಮಾ ಯೋಜನೆ ಜಾರಿ.
• ಕಳೆದ 5 ವರ್ಷಗಳಿಂದ ರಾಜ್ಯ ಮಟ್ಟದ ನೌಕರರ ಕ್ರೀಡಾಕೂಟಗಳ ಯಶಸ್ವಿ ಆಯೋಜನೆ.
• ಸರಕಾರಿ ನೌಕರರ ಕುಂದು-ಕೊರತೆಗಳನ್ನು ಆಲಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜೆಸಿಎಮ್ ಸಮಿತಿ ರಚನೆ ಆದೇಶ.
ಹೀಗೆ ನೂರಾರು ಸೌಲಭ್ಯಗಳನ್ನು ನೌಕರ ಬಾಂಧವರಿಗೆ ಕೊಡಿಸುವ ಮೂಲಕ ನೌಕರರು ಇಂದು ಸಂತಸ, ನೆಮ್ಮದಿಯಿಂದ ಜೀವನ ಸಾಗಿಸಲು ಕಾರಣರಾಗಿದ್ದಾರೆ. ಗದಗ ಜಿಲ್ಲೆಯಾಗಿ 29 ವರ್ಷಗಳ ತರುವಾಯ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಸಲು ಪ್ರಥಮ ಬಾರಿಗೆ ಅವಕಾಶ ಮಾಡಿಕೊಡುವ ಮೂಲಕ ಪ್ರಾದೇಶಿಕ ಸಮಾನತೆಗೆ ಆದ್ಯತೆ ನೀಡಿರುವದನ್ನು ಕಾಣಬಹುದಾಗಿದೆ. ಗಂಡು ಮೆಟ್ಟಿನ ನಮ್ಮ ಮಾತೃನೆಲದಲಿ ಜರುಗುವ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಓಪಿಎಸ್ ಜಾರಿಯಂತಹ ಐತಿಹಾಸಿಕ ನಿರ್ಣಯಗಳ ಮೂಲಕ ಚರಿತ್ರೆಯ ಪುಟ ಸೇರಲೆಂದು ಸಮಸ್ತ ನೌಕರ ಬಾಂಧವರ ಆಶಯವಾಗಿದೆ.
-
ವಿಶ್ವನಾಥ ಯ.ಕಮ್ಮಾರ.
ನಿರ್ದೇಶಕರು, ಕರ್ನಾಟಕ ರಾಜ್ಯ
ಸರಕಾರಿ ನೌಕರರ ಸಂಘ, ಗದಗ ಜಿಲ್ಲಾ ಶಾಖೆ.



