ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುವಂತಾಗಲಿ: ಶಿವಲಿಂಗಪ್ಪ ಬೋಪಳಾಪುರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರೈತರು ಬೆವರು ಸುರಿಸಿ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಇಂದು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಕರ್ನಾಟಕ ರೈತ ಸೇನೆಯ ರೋಣ ತಾಲೂಕು ಉಪಾಧ್ಯಕ್ಷ ಶಿವಲಿಂಗಪ್ಪ ಬೋಪಳಾಪುರ ಆಗ್ರಹಿಸಿದರು.

Advertisement

ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣಗಳಲ್ಲಿ ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳುತ್ತಾರೆ. ಆದರೆ, ಇಂದು ರಾಜ್ಯದಲ್ಲಿ ನಡೆಯುತ್ತಿರುವ ರೈತರ ನಿರಂತರ ಹೋರಾಟಗಳನ್ನು ಗಮನಿಸಿದರೆ ಅವರ ಹೇಳಿಕೆ ಶುದ್ಧ ಸುಳ್ಳು ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.

ಪ್ರಧಾನಿಗಳು ಹೇಳಿದಂತೆ ನಿಜಕ್ಕೂ ರೈತರ ಸಮಸ್ಯೆಗೆ ಮೊದಲ ಆದ್ಯತೆ ನೀಡಿದ್ದರೆ, ಇಂದು ರೈತರು ಬೀದಿಗಿಳಿದು ಹೋರಾಟ ಮಾಡುವ ಸನ್ನಿವೇಶವೇ ನಿರ್ಮಾಣವಾಗುತ್ತಿರಲಿಲ್ಲ. ಇನ್ನು ಮುಂದಾದರೂ ಸರ್ಕಾರಗಳು ರೈತರ ಕಷ್ಟಗಳಿಗೆ ಸ್ಪಂದಿಸಬೇಕು. ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವಂತೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಹಾಗೂ ಕಬ್ಬು ಬೆಳೆಗಾರರಿಗೆ ಎಂಆರ್‌ಪಿ (ಕನಿಷ್ಠ ಕಾಯ್ದಿರಿಸಿದ ಬೆಲೆ) ಕಾನೂನುಗಳನ್ನು ರಚಿಸಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ರೈತನ ಹಿತಕ್ಕಾಗಿ ನಿರ್ದಿಷ್ಟವಾದ ಕಾನೂನು ರೂಪಗೊಂಡು, ಆತನ ಬೆಳೆಗೆ ಸಮರ್ಪಕ ಬೆಲೆ ಸಿಗುವಂತಾಗಬೇಕು. ಪ್ರಧಾನ ಮಂತ್ರಿಗಳು ರೈತರ ಸಮಸ್ಯೆಗೆ ಮೊದಲ ಆದ್ಯತೆ ಎಂದು ಸುಳ್ಳು ಹೇಳುವುದನ್ನು ಬಿಟ್ಟು ನಿಜವಾಗಿ ರೈತರ ಪರವಾಗಿ ನಿಲ್ಲಬೇಕು. ಇಲ್ಲದಿದ್ದರೆ, ಗದಗ ಜಿಲ್ಲೆ ಸೇರಿದಂತೆ ಇಡೀ ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡಿ ರೈತರ ಶಕ್ತಿಯನ್ನು ಪ್ರದರ್ಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರೈತ ಸೇನೆಯ ಪದಾಧಿಕಾರಿಗಳಾದ ಶಿವಾನಂದ ಸುರೆಬಾನ, ರಮೇಶ ಚಲವಾದಿ, ಹನುಮಂತ, ಶೇಖಸಾಬ್ ಪಿಂಜಾರ ಮುಂತಾದವರು ಉಪಸ್ಥಿತರಿದ್ದರು.

 


Spread the love

LEAVE A REPLY

Please enter your comment!
Please enter your name here