ವಿಜಯಸಾಕ್ಷಿ ಸುದ್ದಿ, ಗದಗ: ಕಲೆ, ಸಾಹಿತ್ಯ, ಸಂಸ್ಕೃತಿಯ ನೆಲೆಬೀಡಾದ ಗದಗ ಜಿಲ್ಲೆ ಕ್ರೀಡಾಕ್ಷೇತ್ರಕ್ಕೂ ಅಪಾರ ಕೊಡುಗೆಯನ್ನು ನೀಡಿದೆ. ಗದುಗಿನಿಂದ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಹಾಕಿ, ಕ್ರಿಕೆಟ್, ಕುಸ್ತಿ, ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಕ್ರೀಡಾಪಟುಗಳು ಹೊರಹೊಮ್ಮಿದ್ದಾರೆ. ಇಂತಹ ಗದಗ ಜಿಲ್ಲೆಯಲ್ಲಿ ರಾಜ್ಯಮಟ್ಟದ ಪ.ಪೂ ಕಾಲೇಜು ವಿದ್ಯಾರ್ಥಿಗಳ ಟೆನ್ನಿಕಾಯಿಟ್ ಪಂದ್ಯಾಟಗಳು ನಡೆಯುತ್ತಿರುವುದು ಸ್ವಾಗತಾರ್ಹ. ಗದಗ ಜಿಲ್ಲೆಯಿಂದ ಅನೇಕ ರಾಷ್ಟ್ರೀಯ ಮಟ್ಟದ ಟೆನ್ನಿಕಾಯಿಟ್ ಕ್ರೀಡಾಪಟುಗಳು ಹೊರಹೊಮ್ಮಲೆಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲ ಆಶಿಸಿದರು.
ಅವರು ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ, ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ, ಪ.ಪೂ.ಶಿ ಇಲಾಖೆ ಬೋಧಕೇತರ ಸಂಘದ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಸಂಜೆ ಗದುಗಿನ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ನೆರವೇರಿದ ಕರ್ನಾಟಕ ರಾಜ್ಯ ಪ.ಪೂ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಟೆನ್ನಿಕಾಯಿಟ್ ಪಂದ್ಯಾಟಗಳನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸರಕಾರದಿಂದ ಗದಗ ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾಟಗಳನ್ನು ಆಡಿಸಬಹುದಾದಂತಹ ಮಹಾತ್ಮ ಗಾಂಧಿ ಹಾಕಿ ಟರ್ಫ್ ಗ್ರೌಂಡ್, ಕ್ರಿಕೆಟ್ ನೆಟ್ ಪ್ರಾಕ್ಟಿಸ್ ಗ್ರೌಂಡ್, ನಾಲ್ಕು ಈಜುಕೊಳಗಳು ಈಗಾಗಲೇ ಕ್ರೀಡಾಪಟುಗಳಿಗೆ ಸದ್ಬಳಕೆಯಾಗುತ್ತಿದ್ದು, ಶೀಘ್ರದಲ್ಲಿಯೇ ಕಳಸಾಪೂರ ರಸ್ತೆಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ವುಡನ್ ಕೋರ್ಟ್‌ನನ್ನು ಸಿದ್ಧಪಡಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವ್ಹಿ. ಸಂಕನೂರ ಮಾತನಾಡಿ, ಕ್ರೀಡಾಪಟುಗಳಿಗೆ ಮಾರ್ಗದರ್ಶನ ಮಾಡಲು ಸರ್ಕಾರವು ಪ್ರಾಥಮಿಕ, ಪ್ರೌಢ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಸಮಾರಂಭದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಉಪವಿಭಾಗಾಧಿಕಾರಿ ಗಂಗಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗದಗ ಜಿ.ಪಂ ಮಾಜಿ ಅಧ್ಯಕ್ಷರುಗಳಾದ ವಾಸಣ್ಣ ಕುರುಡಗಿ, ಸಿದ್ದಲಿಂಗೇಶ ಪಾಟೀಲ, ಕ್ರೀಡಾ ವೀಕ್ಷಕರಾಗಿ ಆಗಮಿಸಿದ ಹಾಸನದ ಕೃಷ್ಣಪ್ಪ, ನಿರ್ಣಾಯಕರ ತಂಡದ ಮುಖ್ಯಸ್ಥರಾದ ನವೀನಕುಮಾರ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ವಿಶೇಷ ಆಮಂತ್ರಿತರಾಗಿ ಭಾಗವಹಿಸಿದ್ದರು.
ಸಂಜನಾ ತೆಂಬದಮನಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಂ.ಸಿ. ಕಟ್ಟಿಮನಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ, ಪ್ರೊ. ಪ್ರಿಯಾಂಕ ಬೊಮ್ಮಾಯಿನವರ ನಿರೂಪಿಸಿದರು. ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್. ಸೋಮಣ್ಣವರ ವಂದಿಸಿದರು. ಪ.ಪೂ.ಶಿ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗ ಮಸನಾಯಿಕ, ಹಿರಿಯ ಪ್ರಾಚಾರ್ಯರಾದ ಜಿ.ಎನ್. ಕುರ್ತಕೋಟಿ, ಗಿರಿತಮ್ಮಣ್ಣವರ, ಜೆ.ಎ. ಶಿರಸಿ, ಹಾದಿಮನಿ, ಅಶೋಕ ಅಂಗಡಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ರಾಜ್ಯದ 30 ಶೈಕ್ಷಣಿಕ ಜಿಲ್ಲೆಗಳಿಂದ ಸುಮಾರು 300ಕ್ಕೂ ಹೆಚ್ಚು ಬಾಲಕ ಮತ್ತು ಬಾಲಕಿಯರ ತಂಡದ ಕ್ರೀಡಾಪಟುಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲೆಯ ಪ.ಪೂ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರುಗಳಾದ ವಿ.ಎಂ. ಪಾಟೀಲ, ಬಿ.ವಿ. ಪಾಟೀಲ, ರಮಾಕಾಂತ ದೊಡ್ಡಮನಿ, ಶಶಿಧರ ಕುರಿ, ಕಿಶೋರ ನಾಗರಕಟ್ಟಿ, ಪೂರ್ಣಿಮಾ ಹೊಸಮನಿ, ವಾಯ್.ಎಸ್. ಮತ್ತೂರ, ಪ್ರಾ. ಹಾವೇರಿ, ಜಿಲ್ಲಾ ಕ್ರೀಡಾ ಸಂಚಾಲಕರಾದ ಎಚ್.ಎಸ್. ಶಿವಪ್ಪಯ್ಯನಮಠ, ವಾಯ್.ಎಸ್. ಹುನಗುಂದ, ಚೇಗರೆಡ್ಡಿ ಸೇರಿದಂತೆ ಉಪನ್ಯಾಸಕರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ.ಪೂ.ಶಿ ಇಲಾಖೆಯಲ್ಲಿ ಸಾಧನೆಗೈದ ಹಾಗೂ ಕ್ರೀಡಾಕೂಟಕ್ಕೆ ಸಹಾಯ-ಸಹಕಾರ ಸಲ್ಲಿಸಿದ ಮೇಜರ್ ಡಾ. ಪ್ರಾ. ಬಿ.ಎಸ್. ರಾಠೋಡ, ರಾಜೇಶ ಕುಲಕರ್ಣಿ, ಪ್ರಾ. ವಿ.ಎಸ್. ದಲಾಲಿ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆಗೈದ ಗದಗ ಜಿಲ್ಲೆಯ ಪ.ಪೂ ಕಾಲೇಜು ವಿದ್ಯಾರ್ಥಿಗಳನ್ನು, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ವಿಕಲಚೇತನ ಕ್ರೀಡಾಪಟುಗಳನ್ನು ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ.ಪೂ ಕಾಲೇಜುಗಳ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಸಂಘಟಿಸಿದ ಪ್ರಾಚಾರ್ಯರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಕೆ.ಎಚ್. ಪಾಟೀಲ ಸ್ಟೇಡಿಯಂನಲ್ಲಿ ಫುಟ್‌ಬಾಲ್ ಟರ್ಫ್ ಮೈದಾನ ಮತ್ತು ಫ್ಲಡ್‌ಲೈಟ್ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಈ ಎಲ್ಲ ಕ್ರೀಡಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯಬೇಕೆಂದು ಸಚಿವ ಎಚ್.ಕೆ. ಪಾಟೀಲ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.



