ಹಿರಿಯರ ಅನುಭವಗಳು ಬಾಳಿನ ಬೆಳಕಾಗಲಿ: ಈಶ್ವರ ಉಳ್ಳಾಗಡ್ಡಿ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ನಾಡಿನ ಅವಕಾಶ ವಂಚಿತ ಹಾಗೂ ನಾಡಿನ ಮಕ್ಕಳ ಪಾಲಿನ ಕಾಮಧೇನುವಾಗಿದೆ. ಮಕ್ಕಳಿಗಾಗಿ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮಗಳು ನಿಜಕ್ಕೂ ಅರ್ಥಪೂರ್ಣವಾಗಿದ್ದು, ಅಧ್ಯಕ್ಷ ಸಂಗಮೇಶ ಬಬಲೇಶ್ವರ ನೇತೃತ್ವದಲ್ಲಿ ಮಕ್ಕಳ ಬದುಕಿಗೆ ಹೊಸ ತಿರುವು ನೀಡಲು ಅಕಾಡೆಮಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ ಎಂದು ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.

Advertisement

ಅವರು ಮಂಗಳವಾರ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ನೇಚರ್ ಫಸ್ಟ್ ಇಕೋ ವಿಲೇಜ್ ನಲ್ಲಿ ಬಾಲಮಂದಿರ ಮಕ್ಕಳಿಗಾಗಿ ಏರ್ಪಡಿಸಿರುವ 15 ದಿನಗಳ ವಸತಿಯುತ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನಿಂದ 15 ದಿನಗಳವರೆಗೆ ರಾಜ್ಯದ 31 ಜಿಲ್ಲೆಗಳ ಬಾಲಮಂದಿರ ಮಕ್ಕಳಿಗಾಗಿ ಏರ್ಪಡಿಸಿರುವ ಮಕ್ಕಳ ವ್ಯಕ್ತಿತ್ವ ವಿಕಸನ ಕಾರ್ಯಾಗಾರವು ಮಾದರಿ ಕಾರ್ಯಕ್ರಮ. ಇಲ್ಲಿ ವಿಶೇಷವಾದ ಸ್ಪೂರ್ತಿಯನ್ನು ಪಡೆದು ನಿಮ್ಮ ಬದುಕನ್ನು ಬದಲಾಯಿಸಿಕೊಳ್ಳಿ ಮತ್ತು ರೂಪಿಸಿಕೊಳ್ಳಿ. ಇಂಥ ಪರಿಸರಸ್ನೇಹಿ ಸ್ಥಳದಲ್ಲಿ ಮಕ್ಕಳಿಗಾಗಿ ನಿಸರ್ಗದ ಮಡಿಲಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾದದ್ದು ಎಂದು ಹೇಳಿದರು.

ನಾಡಿನ ಮೂಲೆ ಮೂಲೆಯಿಂದ ಪಾಲ್ಗೊಂಡಿರುವ ಮಕ್ಕಳು ಈ ವ್ಯಕ್ತಿತ್ವ ವಿಕಸನ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು. 10 ಜಿಲ್ಲೆಗಳಂತೆ ಮೂರು ತಂಡಗಳನ್ನು ಮಾಡಿ, ಐದು ದಿನಗಳಂತೆ ಒಟ್ಟು 15 ದಿನ ನಡೆಯುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹಲವಾರು ಜನ ಸಾಧಕರನ್ನು ಭೇಟಿ ಮಾಡಲಿದ್ದೀರಿ, ಅವರ ಅನುಭವಗಳು ನಿಮ್ಮ ಬಾಳಿಗೆ ಬೆಳಕಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪರಿಸರವಾದಿ ಪಿ.ವಿ. ಹಿರೇಮಠ ಮಾತನಾಡಿ, ಪರಿಸರವನ್ನು ಉಳಿಸುವ, ಪರಿಸರ ಜಾಗೃತಿ ಮೂಡಿಸುವ ಕೆಲಸ ಇಂದಿನ ತುರ್ತು ಅಗತ್ಯವಾಗಿದ್ದು, ಮಕ್ಕಳು ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಶಿಕ್ಷಕ ಫಕಿರೇಶ ಮುಡಿಯನ್ನವರ, ಅಕ್ಷರ ದಾಸೋಹದ ಅಧಿಕಾರಿ ಬಸವರಾಜ, ಶಿಕ್ಷಕ ಹಾಗೂ ಸಾಹಿತಿ ಬೆಂತೂರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅನ್ನಪೂರ್ಣ ಸಂಗಳ. ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧಿಕಾರಿಗಳಾದ ಪುಷ್ಪ ಹಂಜಗಿ, ಸ್ವರ್ಣಲತಾ, ಮೇತಿ, ಸಂಪನ್ಮೂಲ ವ್ಯಕ್ತಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಮೊದಲ ಹಂತದ 9 ಜಿಲ್ಲೆಗಳ ಬಾಲಮಂದಿರದ ಮಕ್ಕಳು ಹಾಗೂ ಕ್ಷೇಮ ಪಾಲಕರು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಆಶಯವು ಈ ನಾಡಿನ ಅವಕಾಶ ವಂಚಿತ ಮಕ್ಕಳ ಬದುಕಿಗೆ ಹೊಸ ಕಾಯಕಲ್ಪ ನೀಡುವುದಾಗಿದೆ. ಅವಕಾಶ ವಂಚಿತ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎನ್ನುವುದು ನಮ್ಮೆಲ್ಲರ ಸದಾಶಯವಾಗಿದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here