ವಿಜಯಸಾಕ್ಷಿ ಸುದ್ದಿ, ಗದಗ : ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಇರುವ ಸೌಲಭ್ಯಗಳು ಹಾಗೂ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಕುರಿತಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಜಾಗೃತಿ ಅಭಿಯಾನದ ಸದುಪಯೋಗವನ್ನು ಕಾರ್ಮಿಕರು ಪಡೆದುಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ನುಡಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ಏರ್ಪಡಿಸಲಾಗಿದ್ದ ಕಾರ್ಮಿಕ ಕಲ್ಯಾಣ ಜಾಗೃತಿ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್. ಜಾಧವ ಮಾತನಾಡಿ, ಎಲ್‌ಇಡಿ ಪರದೆಯುಳ್ಳ ವಾಹನದ ಮೂಲಕ ನೋಂದಾಯಿತ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಗದಗ ಜಿಲ್ಲೆಯಲ್ಲ್ಲಿ ಒಟ್ಟು 1,06,000 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಅನರ್ಹ ಕಾರ್ಮಿಕರನ್ನು ಗುರುತಿಸಿ ನಕಲಿ ಗುರುತಿನ ಚೀಟಿಯನ್ನು ಹಿಂಪಡೆಯಲು ಅಭಿಯಾನವನ್ನು ಸಹ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 3 ಸಾವಿರಕ್ಕೂ ಅಧಿಕ ಅನರ್ಹ ಕಾರ್ಮಿಕರ ನೋಂದಣಿಯನ್ನು ರದ್ದುಪಡಿಸಲಾಗಿದೆ. ನಕಲಿ ಗುರುತಿನ ಚೀಟಿ ಹಿಂದಿರುಗಿಸಿ ನೋಂದಣಿಯನ್ನು ರದ್ದುಪಡಿಸಿಕೊಳ್ಳಿ ಎಂಬ ಅಭಿಯಾನವನ್ನು ಜಿಲ್ಲಾದ್ಯಂತ ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 60 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮಾಸಿಕ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ. ಕುಟುಂಬ ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ, ಟೂಲ್ ಕಿಟ್ ಸೌಲಭ್ಯ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯ ಧನ, ಅಪಘಾತ ಪರಿಹಾರ, ಪ್ರಮುಖ ವೈದ್ಯಕೀಯ ಸಹಾಯ ಧನ, ಮದುವೆ ಸಹಾಯ ಧನ, ತಾಯಿ-ಮಗು ಸಹಾಯ ಹಸ್ತ ಹೀಗೆ ಕಾರ್ಮಿಕ ಇಲಾಖೆಯಿಂದ ಹತ್ತು ಹಲವಾರು ಸೌಲಭ್ಯಗಳನ್ನು ಸರ್ಕಾರ ಕಾರ್ಮಿಕರಿಗೆ ಒದಗಿಸುತ್ತಾ ಬಂದಿದ್ದು, ಅರ್ಹರು ನೋಂದಣಿ ಮಾಡಿಕೊಳ್ಳಬೇಕು. ಅನರ್ಹ ಕಾರ್ಮಿಕರು ತಮ್ಮ ನೋಂದಣಿಯನ್ನು ತಾವೇ ರದ್ದು ಪಡಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಮಿಕ ನೀರಿಕ್ಷಕರು, ವಾರ್ತಾಧಿಕಾರಿ ವಸಂತ ಮಡ್ಲೂರ, ಕಾರ್ಮಿಕ ಇಲಾಖೆಯ ಸಂದೇಶ ಪಾಟೀಲ ಸೇರಿದಂತೆ ಇತರರು ಇದ್ದರು.
ಅನರ್ಹ ಕಾರ್ಮಿಕರು ನಕಲಿ ಗುರುತಿನ ಚೀಟಿಯನ್ನು ಹಿಂದಿರುಗಿಸಿ ನೋಂದಣಿಯನ್ನು ರದ್ದು ಪಡಿಸಿಕೊಳ್ಳಬೇಕು. ಅರ್ಹರಿಗೆ ಸರ್ಕಾರದ ಸೌಲಭ್ಯಗಳು ತಲುಪಲಿ. ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲೆಗಳನ್ನು ಸಲ್ಲಿಸಿ ನೋಂದಣಿಯಾಗುವದು ಮತ್ತು ಸೌಲಭ್ಯಗಳನ್ನು ಪಡೆಯುವದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ಪ್ರಕಾರ ಕಾರ್ಮಿಕ ಇಲಾಖೆಯಿಂದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಹೇಳಿದರು.