ವಿಜಯಸಾಕ್ಷಿ ಸುದ್ದಿ, ರೋಣ: 6 ತಿಂಗಳ ವೇತನ ಪಾವತಿ, ಸೇವಾ ಭದ್ರತೆ, ಆರೋಗ್ಯ ವಿಮೆ, ಕೆಲಸದ ಸ್ಥಳದಲ್ಲಿ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನರೇಗಾ ಹೊರಗುತ್ತಿಗೆ ನೌಕರರು ತಮ್ಮ ಕೆಲಸ-ಕಾರ್ಯಗಳನ್ನು ಸ್ಥಗಿತಗೊಳಿಸಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಅಸಹಕಾರ ಚಳುವಳಿ ನಡೆಸಿದರು.
ಈ ವೇಳೆ ನರೇಗಾ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಬಾಳಿಕಾಯಿ ಮಾತನಾಡಿ, ಕೂಲಿಕಾರರಿಗೆ ನರೇಗಾ ಕೆಲಸ ಕೊಡಿಸುವುದು, ಯೋಜನೆಯಡಿ ಹಳ್ಳಿಗಳಲ್ಲಿ ಆಸ್ತಿ ಸೃಜನೆಗಳಲ್ಲಿ ನರೇಗಾ ನೌಕರರ ಪಾತ್ರ ಬಹು ಮುಖ್ಯವಾಗಿದೆ. ಆದರೆ, ನೌಕರರಿಗೆ ಪ್ರತಿ ತಿಂಗಳು ವೇತನ ಸರಿಯಾಗಿ ಆಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಮಕ್ಕಳ ಶಾಲಾ ದಾಖಲಾತಿ, ಕುಟುಂಬದ ನಿರ್ವಹಣೆ, ಕೌಟುಂಬಿಕ ಆರೋಗ್ಯ ಸಮಸ್ಯೆಗೆ ವೇತನ ಪಾವತಿಯಾಗದೆ ಇರುವ ಕಾರಣ ರಾಜ್ಯ ಸಂಘದ ನಿರ್ದೇಶನದಂತೆ ರಾಜ್ಯಾದ್ಯಂತ ಅಸಹಕಾರ ಚಳುವಳಿ ಆರಂಭಿಸಲಾಗಿದೆ. ನಮ್ಮ ತಾಲೂಕಿನ ಎಲ್ಲಾ ನರೇಗಾ ನೌಕರರು ಕಚೇರಿಗೆ ಹಾಜರಾಗಿದ್ದರೂ ಯಾವುದೇ ಕೆಲಸ ಮಾಡದೆ ಅಸಹಕಾರ ಚಳುವಳಿ ಹಮ್ಮಿಕೊಂಡಿದ್ದೇವೆ ಎಂದರು.
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕು ಹಂತದಲ್ಲಿ ಟಿಐಇಸಿ, ಟಿಸಿ, ಟಿಎಂಐಎಸ್, ಟಿಎಇ (ಸಿವಿಲ್, ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ) ವಿಭಾಗದಲ್ಲಿ ಹಾಗೂ ಬಿಎಫ್ಟಿ ಸೇರಿ ವಿವಿಧ ಹುದ್ದೆಗಳಲ್ಲಿ 13ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ನರೇಗಾ ಯೋಜನೆಯ ಸಿಬ್ಬಂದಿಗೆ ಕಳೆದ 6 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಸರ್ಕಾರ ಕೂಡಲೇ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಈ ಸಂದರ್ಭದಲ್ಲಿ ನರೇಗಾ ನೌಕರರಾದ ಅರುಣ ತಂಬ್ರಳ್ಳಿ, ವಂಸತ ಅನ್ವಾರಿ, ಶಾಂತಾ ತಿಮ್ಮರೆಡ್ಡಿ, ರೇಷ್ಮಾ ಕೇಲೂರ, ಮಂಜುಳಾ ಪಾಟೀಲ, ಅಶೋಕ ಕಂಬಳಿ, ಪ್ರಕಾಶ ಅಂಬಕ್ಕಿ, ಯಲ್ಲಪ್ಪ ಗೋರವರ, ಪ್ರಕಾಶ ತಳವಾರ, ಸೇರಿದಂತೆ ಇನ್ನಿತರ ನರೇಗಾ ಸಿಬ್ಬಂದಿಗಳು ಇದ್ದರು.
ತಾಲೂಕಾ ಅಡ್ಮಿನ್ ಅಸಿಸ್ಟೆಂಟ್ ಅರುಣ ಶಿಂಗ್ರಿ ನರೇಗಾ ಸಿಬ್ಬಂದಿಗಳೊAದಿಗೆ ಚರ್ಚಿಸಿ, ಈ ಅಸಹಕಾರ ಚಳುವಳಿ ವೇತನ ಪಾವತಿ ಅಷ್ಟೇ ಅಲ್ಲ, ಆರೋಗ್ಯ ವಿಮೆ, ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳಿಗಾಗಿ ನಡೆಯುತ್ತಿದೆ. ಇಂದಿನಿಂದ ಅಸಹಕಾರ ಚಳುಚಳಿ ಆರಂಭವಾಗಿದ್ದು, ವೇತನ ಪಾವತಿಯಾಗುವವರೆಗೂ ನಿರಂತರವಾಗಿ ಚಳುವಳಿ ನಡೆಸಲಾಗುತ್ತದೆ ಎಂದರು.