ವಿಜಯಸಾಕ್ಷಿ ಸುದ್ದಿ, ಗದಗ: ಸೋಮವಾರ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ, ಈ ರೀತಿಯ ಅಪವಾದನೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿರುವ ಸುಳ್ಳು ಸುದ್ದಿ ಎಂದೂ ತಿಳಿಸಿದ್ದಾರೆ. ಆದರೆ, ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಕ್ಟೋಬರ್ 15ರಂದು ಹೊರಡಿಸಿದ ಸುತ್ತೋಲೆಯಲ್ಲಿ ಎಪಿಎಸ್ ಒಚಿಟಿಪಿ ಶಾಲೆಗಳೊಂದಿಗೆ ಸುತ್ತಲಿನ ಕಡಿಮೆ ದಾಖಲಾತಿಯ ಶಾಲೆಗಳನ್ನು ವಿಲೀನಗೊಳಿಸಬೇಕು ಎಂದು ಆದೇಶಿಸಿದೆ.
ಅಂತೆಯೇ, ಎಪಿಎಸ್ ಶಾಲೆಯನ್ನಾಗಿ ಉನ್ನತೀಕರಿಸುತ್ತಿರುವ ಹಲವು ಶಾಲೆಗಳಿಗೆ ಸುತ್ತಲಿನ ಶಾಲೆಗಳನ್ನು ವಿಲೀನಗೊಳಿಸಬೇಕು ಎಂಬ ಆದೇಶವನ್ನು ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದ ಹಲವು ಶಾಲೆಗಳಿಗೆ ನೀಡಲಾಗಿದೆ. ಅಧಿವೇಶನದಲ್ಲಿ ಸಚಿವರೇ ಹೇಳಿದಂತೆ, ಗ್ರಾಮ ಪಂಚಾಯಿತಿಗೊಂದರಂತೆ ಏಕೀಕೃತ ಎಪಿಎಸ್ ಶಾಲೆಗಳನ್ನು ತೆರೆಯಲಾಗುತ್ತದೆ, ಅಂದರೆ ತಮ್ಮದೇ ಇಲಾಖೆಯ ಆದೇಶದಂತೆ ಸರ್ಕಾರ ಮುಂದುವರೆಯುತ್ತಿದೆ.
ಈಗ ಮೂಡುವ ಪ್ರಶ್ನೆಯೆಂದರೆ, ಸರ್ಕಾರದ ಆದೇಶಗಳು ಹೇಳುವುದೇ ಒಂದು, ಮಂತ್ರಿಗಳ ಹೇಳಿಕೆ ಇನ್ನೊಂದು. ಜನ ಯಾವುದನ್ನು ನಂಬಬೇಕು? ಕನ್ನಡ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂಬ ಸಚಿವರ ಮಾತು ನಿಜವಾದಲ್ಲಿ, ಈ ಕೂಡಲೇ ರಾಜ್ಯ ಸರ್ಕಾರ ಈ ಹಿಂದೆ ನಮೂದಿಸಿರುವ ವಿಲೀನದ ಅಂಶವನ್ನು ಹಿಂಪಡೆಯಲಿ, ವಿಲೀನದ ಹೆಸರಿನಲ್ಲಿ ಕಡಿಮೆ ದಾಖಲಾತಿಯ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಲಿಖಿತ ಆದೇಶ ಹೊರಡಿಸಲಿ ಎಂದು ಐಎಸ್ಒ ಜಿಲ್ಲಾ ಸಂಚಾಲಕಿ ಎಂ. ಶಾಂತಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.



