ಜನೌಷಧಿ ಕೇಂದ್ರಗಳು ಮುಂದುವರೆಯಲಿ

0
Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಆರ್ಥಿಕವಾಗಿ ಹಿಂದುಳಿದ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ವರ್ಗದ ಜನತೆಗೆ ಅವರ ಅನಾರೋಗ್ಯದ ವೇಳೆಯಲ್ಲಿ ಅನುಕೂಲವಾಗಲು ಜನೌಷಧಿ ಯೋಜನೆಯನ್ನು ಮೋದಿಯವರು ಜಾರಿಗೆ ತಂದರು ಎಂದು ಬಿಜೆಪಿ ಹಿರಿಯ ಮುಖಂಡ ಬಾಗಳಿ ಕೊಟ್ರೇಶಪ್ಪ ತಿಳಿಸಿದರು.

Advertisement

ರಾಜ್ಯ ಸರ್ಕಾರವು ಜನೌಷಧಿ ಕೇಂದ್ರಗಳನ್ನು ಮುಚ್ಚುತ್ತಿರುವುದನ್ನು ಖಂಡಿಸಿ ಹರಪನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಶೇ.20ರಿಂದ 70 ರಿಯಾಯಿತಿ ದರದಲ್ಲಿ ಜನೌಷಧಿ ಕೇಂದ್ರದಲ್ಲಿ ಬಡವರ್ಗದ ಜನತೆಗೆ ಔಷಧಿಗಳು ದೊರೆಯುತ್ತಿದ್ದು, ಅದರಿಂದ ಆರ್ಥಿಕವಾಗಿ ಹಿಂದುಳಿದ ಬಡಜನತೆಗೆ ಸಾಕಷ್ಟು ಅನುಕೂಲವಾಗುತ್ತಿದೆ. ಈಗ ದಿನೇಶ್ ಗುಂಡೂರಾವ್ ಅವರು ಈ ಜನೌಷಧಿ ಕೇಂದ್ರಗಳನ್ನು ಮುಚ್ಚಿ, ಎಲ್ಲಾ ಔಷಧಿಗಳ ಮೇಲೆ ತೆರಿಗೆ ಹೆಚ್ಚಿಸಿ ಸುಳ್ಳು ಗ್ಯಾರಂಟಿಗಳ ಬೊಕ್ಕಸಕ್ಕೆ ಹಣ ಹೊಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಖಾಸಗಿ ಔಷಾಧಲಯಗಳಲ್ಲಿ ಬಡವರಿಗೆ ವೈದ್ಯರು ನೀಡಿದ ಮಾತ್ರೆಗಳನ್ನು ಖರೀದಿಸಲು ಸಾಧ್ಯವಾಗದ ಕಾರಣ ಪ್ರಧಾನಮಂತ್ರಿಯವರು ದೇಶದ ಎಲ್ಲಾ ರಾಜ್ಯಗಳಲ್ಲಿ ಈ ಯೋಜನೆ ಜಾರಿಗೆ ತಂದು ಕೋಟ್ಯಾಂತರ ಬಡವರ ಜೀವವನ್ನು ಉಳಿಸುವ ಕೆಲಸವನ್ನು ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರವು ಇವುಗಳನ್ನು ಮುಚ್ಚಿಸುವ ಮೂಲಕ ಬಡವರ ಜೀವವನ್ನು ತೆಗೆಯುವ ಕಾರ್ಯಕ್ಕೆ ಕೈಹಾಕಿರುವುದು ಖಂಡನೀಯ ಎಂದರು.

ಮಂಡಲ ಅಧ್ಯಕ್ಷ ಕೆ.ಲಕ್ಷ್ಮಣ ಮಾತನಾಡಿ, ಜನೌಷಧಿ ಕೇಂದ್ರ ಮುಚ್ಚುವುದರಿಂದ ಸಾಕಷ್ಟು ಬಡ ಜನರಿಗೆ ಅನಾನುಕೂಲ, ಆರ್ಥಿಕ ನಷ್ಟ ಉಂಟಾಗಲಿದೆ. ಈ ಯೋಜನೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಲಿಂಬ್ಯಾನಾಯ್ಕ, ಮುಖಂಡರಾದ ಎಂ.ಪಿ. ನಾಯ್ಕ, ನಂಜನಗೌಡ, ಓಂಕಾರಗೌಡ, ಆರುಂಡಿ ನಾಗರಾಜ, ವೆಂಕಟೇಶ್ ನಾಯ್ಕ, ಉದಯ್ ಕುಮಾರ, ಕಣಿವಿಹಳ್ಳಿ ಮಂಜುನಾಥ, ಚನ್ನನಗೌಡ, ಮುದುಕವ್ವನವರ ಶಂಕರ್, ಮಂಜ್ಯನಾಯ್ಕ, ಮಹೇಶ್ ಜವಳಿ, ಕಡೇಮನಿ ಸಂಗಮೇಶ್, ಬಾಗಳಿ ಜಗದೀಶ, ಮಟ್ಟಿ ಮಲ್ಲಿಕಾರ್ಜುನ, ಭದ್ರಿ ನಾರಾಯಣ, ಬೂದಿ ನವೀನ, ಬಂಡ್ರಿ ರಾಜು, ಮುನೇಗೌಡ, ಸ್ವಪ್ನ, ರೇಖಮ್ಮ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here