ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಮೃಗಾಲಯದಲ್ಲಿ ನೈಟ್ ಸಫಾರಿ ಆರಂಭ ಮಾಡುವ ಮೂಲಕ ದೇಶದಲ್ಲಿಯೇ ಅತ್ಯಂತ ಆಕರ್ಷಣೆಯ ಮೃಗಾಲಯವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗ ಕಾರ್ಯೋನ್ಮುಖವಾಗಬೇಕೆಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.
ನಗರದ ಮೃಗಾಲಯದಲ್ಲಿ ಬುಧವಾರ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರಗಳ ಸಹಯೋಗದಲ್ಲಿ ನಿರ್ಮಿಸಿರುವ ಗುಳ್ಳೆನರಿ, ಬಂಗಾಳಿ ನರಿ ಹಾಗೂ ಕೆನ್ನಾಯಿ ಪ್ರಾಣಿ ಮನೆ ಹಾಗೂ ಆವರಣ ಮತ್ತು ಮಾಗಡಿ ಕೆರೆ ರಾಮ್ಸಾರ್ ಸೈಟ್ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈಗಾಗಲೇ ಮೃಗಾಲಯದಲ್ಲಿ ಶೇ.70ರಷ್ಟು ಪ್ರಾಣಿಗಳಿದ್ದು, ಇನ್ನುಳಿದ ಪ್ರಾಣಿಗಳನ್ನು ಶೀಘ್ರವೇ ತರಲಾಗುವುದು ಎಂದು ಹೇಳಿದರು.
2025 ಮಾರ್ಚ್ 16ರಂದು ಕೆ.ಎಚ್. ಪಾಟೀಲ ಜನ್ಮಶತಾಬ್ಧಿ ವರ್ಷಕ್ಕೆ ರಚನಾತ್ಮಕ ಕೆಲಸ ಕೈಗೊಂಡು ಮೃಗಾಲಯಕ್ಕೆ ನೈಟ್ ಸಫಾರಿ ಕಲ್ಪಿಸುವ ಮೂಲಕ ದೇಶದಲ್ಲಿಯೇ ಅತ್ಯಂತ ಆಕರ್ಷಣೆಯ ಮೃಗಾಲಯ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿ, ಅದಕ್ಕೆ ಅಗತ್ಯವಿರುವ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡಲಾಗುವುದು ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ ಮೀನಾ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಡಾ. ಎಚ್.ಎನ್. ನಾಗನೂರ, ರವಿ ಮೂಲಿಮನಿ, ಪ್ರಭು ಬುರಬುರೆ, ಎಸ್.ಎನ್. ಬಳ್ಳಾರಿ, ಎಂ.ಆರ್. ಪಾಟೀಲ, ಶಶಿಕಲಾ ಹೊಸಮನಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ಮಾಗಡಿ ಕೆರೆಯು ಯುನೆಸ್ಕೋ ಗುರುತಿಸುವ ರಾಮ್ಸಾರ್ ಸೈಟ್‌ಗೆ ಸೇರ್ಪಡೆಯಾಗಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಸಹಕಾರಿ ಧುರೀಣ ಕೆ.ಎಚ್. ಪಾಟೀಲ ಅವರು ಕಂಡ ಕನಸಿನಂತೆ ಗದಗ ಮೃಗಾಲಯ ಆರಂಭವಾಗಿದೆ. ಅವರ ಆಶಯದಂತೆ ಮೃಗಾಲಯ ಸರಿಯಾಗಿ ನಡೆಯಬೇಕು. ಗದಗ ಮೃಗಾಲಯಕ್ಕೆ ಹೆಚ್ಚುವರಿಯಾಗಿ 13 ಎಕರೆ ಜಮೀನು ಜೊತೆಗೆ ಒಟ್ಟು 15 ಎಕರೆ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.