ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರವಾಗಿದ್ದು, ಗ್ರಾಮೀಣ ಮಟ್ಟದಲ್ಲಿರುವ ಗ್ರಾ.ಪಂ ಆಡಳಿತದಲ್ಲಿ ಜನರ ನೋವಿಗೆ ಸ್ಪಂದಿಸುವ ಆಡಳಿತ ನೀಡಬೇಕಾದ ಅವಶ್ಯಕತೆ ಇದೆ. ಜನರನ್ನು ಎಡತಾಕಿಸುವ ಪ್ರವೃತ್ತಿಯನ್ನು ಅಧಿಕಾರಿಗಳು ಕೈಬಿಡಬೇಕು. ಅಂದಾಗ ಆಡಳಿತ ಯಂತ್ರ ಚುರುಕಾಗಲು ಸಾಧ್ಯವಾಗುತ್ತದೆ ಎಂದು ರಂಭಾಪುರಿ ವೀರಸಿಂಹಾಸನಾಧೀಶ್ವರ ಜ.ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದಂಗಗಳವರು ನುಡಿದರು.
ಅವರು ಶನಿವಾರ ತಾಲೂಕಿನ ಅಡರಕಟ್ಟಿ ಗ್ರಾಮ ಪಂಚಾಯಿತಿ ಕಚೇರಿಯ ನೂತನ ಕಟ್ಟಡ, ಗ್ರಂಥಾಲಯ, ಅಂಗನವಾಡಿ ಕಟ್ಟಡ, ತ್ಯಾಜ್ಯ ವಿಲೇವಾರಿ ಘಟಕಗಳ ಉದ್ಘಾಟನೆ ನೆರವೇರಿಸಿ ನಂತರ ನಡೆದ ಸಭಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸರಕಾರದ ಕೆಲಸ ದೇವರ ಕೆಲಸ ಎನ್ನುವ ರೀತಿಯಲ್ಲಿ ಪಂಚಾಯಿತಿಗಳಲ್ಲಿ ಕಾರ್ಯಗಳು ನಡೆಯಬೇಕು. ಹಳ್ಳಿಗಳು ಉದ್ಧಾರವಾದರೆ ದೇಶ ಉದ್ದಾರವಾಗುತ್ತದೆ ಎನ್ನುವ ಗಾಂಧೀಜಿಯವರ ಮಾತಿನಂತೆ ಗ್ರಾ.ಪಂ, ತಾ.ಪಂ ಹಾಗೂ ಜಿ.ಪಂ ಮೂಲಕ ಅಧಿಕಾರ ವಿಕೇಂದ್ರೀಕರಣ ಕಾರ್ಯವನ್ನು ಮಾಡಿರುವ ಕೀರ್ತಿ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ದೊಡ್ಡಮನಿ ಮತ್ತು ಮಾಜಿ ನೀರಾವರಿ ಸಚಿವ ದಿ. ನಜೀರಸಾಬ ಅವರಿಗೆ ಸಲ್ಲುತ್ತದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಪಕ್ಷ ಎನ್ನುವದನ್ನು ಚುನಾವಣೆಯಲ್ಲಿ ಮಾತ್ರ ಮಾಡಿ ನಂತರ ಜ್ಯಾತ್ಯಾತೀತ, ಪಕ್ಷಾತೀತವಾಗಿ ಹಳ್ಳಿಗಳ ಅಭ್ಯುದಯಕ್ಕೆ ಶ್ರಮಿಸಿ ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಶಿಕ್ಷಣ, ಆರೋಗ್ಯ ಇವುಗಳಲ್ಲಿ ರಾಜಕೀಯ ಪ್ರವೇಶ ಮಾಡಬಾರದು. ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶ ಮಾಡಿರುವದರಿಂದಲೇ ಖಾಸಗಿ ಶಾಲೆಗಳು ಹೆಚ್ಚು ತಲೆ ಎತ್ತುತ್ತಿವೆ. ಹೀಗಾಗಿ ಸರಕಾರಿ ಶಾಲೆಗಳಿಗೆ ಹಿನ್ನಡೆ ಉಂಟಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ರೈತ ಈ ದೇಶದ ಬೆನ್ನೆಲುಬು, ಅವರನ್ನು ಉದ್ಧಾರ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬರುವ ರಾಜಕೀಯ ಮುಖಂಡರು ನಂತರ ಅವರನ್ನು ನೈಪಥ್ಯಕ್ಕೆ ಸರಿಸುತ್ತಾರೆ. ರಾಜ್ಯದಲ್ಲಿ ಪಂಚಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿರುವ ಬಗ್ಗೆ ಆಡಳಿತ ಪಕ್ಷದ ಶಾಸಕ, ಸಚಿವರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿನ ಸರ್ಕಾರದ ಯೋಜನೆಗಳು, ಘೋಷಿಸಿದ ಅನುದಾನವೂ ಇಲ್ಲದ್ದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಸರಕಾರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಕಾರ್ಯದಲ್ಲಿ ಯರೂ ರಾಜಕೀಯ ಮಾಡಬಾರದು. ಅಡರಕಟ್ಟಿ ಆದರ್ಶ ಗ್ರಾಮವಾಗಿದ್ದು, ಗ್ರಾಮದ ಅಬ್ಯುಧಯಕ್ಕಾಗಿ ಹಿರಿಯರು ನೀಡಿದ ಕೊಡುಗೆ ಅನನ್ಯ ಎಂದು ನುಡಿದರು.
ಮುಕ್ತಿ ಮಂದಿರ ಧರ್ಮಕ್ಷೇತ್ರ ಸಂಪರ್ಕಿಸುವ ರಸ್ತೆಗಳು, ಕುಡಿಯುವ ನೀರು, ಯಾತ್ರಿ ನಿವಾಸಗಳ ಅಭಿವೃದ್ಧಿ ಸೇರಿ ಎಲ್ಲವೂ ಜಿಡ್ಡುಗಟ್ಟಿದೆ. ತ್ವರಿತವಾಗಿ ಅಭಿವೃದ್ಧಿ ಕೆಲಗಳಾದರೆ ಭಕ್ತರು, ಜನರು ಮೆಚ್ಚಿಕೊಳ್ಳುತ್ತಾರೆ ಎಂದು ಪಕ್ಕದಲ್ಲಿಯೇ ಇದ್ದ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಸೂಚ್ಯವಾಗಿ ತಿಳಿಸಿದರು.
ಮಾಜಿ ಶಾಸಕರುಗಳಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ ಮಾತನಾಡಿದರು. ರಾಜನಹಳ್ಳಿ ವಾಲ್ಮೀಕಿ ಮಹಾಸಂಸ್ಥಾನದ ಜ.ಶ್ರೀ ವಾಲ್ಮೀಕಿ ಜ.ಪ್ರಸನ್ನಾಂದ ಮಹಾಸ್ವಾಮಿಗಳು ಹಾಗೂ ಆದರಹಳ್ಳಿ ಗವಿಮಠದ ಮಹಾತಪಸ್ವಿ ಡಾ. ಕುಮಾರ ಮಹಾರಾಜರು ನೇತೃತ್ವ ವಹಿಸಿದ್ದರು.
ಚನ್ನಪ್ಪ ಜಗಲಿ, ಎಸ್.ಪಿ. ಬಳಿಗಾರ, ಸುಜಾತಾ ದೊಡ್ಡಮನಿ, ಸುಶೀಲವ್ವ ಲಮಾಣಿ, ಗ್ರಾ.ಪಂ ಅಧ್ಯಕ್ಷೆ ಪ್ರೇಮಕ್ಕ ಮಾನಪ್ಪ ಲಮಾಣಿ, ಉಪಾಧ್ಯಕ್ಷೆ ಕಾಶವ್ವ ದೊಡ್ಡಮನಿ, ಸದಸ್ಯರುಗಳಾದ ನಿಂಗಪ್ಪ ಪ್ಯಾಟಿ, ಗಣೇಶ ನಾಯಕ್, ಸೋಮಪ್ಪ ಹವಳದ, ಹರೀಶ ಲಮಾಣಿ, ಪವಿತ್ರಾ ಗಡೆಪ್ಪನವರ, ಕಮಲವ್ವ ಲಮಾಣಿ, ಕವಿತಾ ಲಮಾಣಿ, ಲಕ್ಷ್ಮೀ ಕಾರಬಾರಿ ಹಾಗೂ ಸೋಮಕ್ಕ ತಳವಾರ ಮತ್ತು ಹಿರಿಯರಾದ ಚನ್ನಪ್ಪ ಹಳೆಮನಿ, ಸೋಮಣ್ಣ ಭಂಗಿ, ಕುಮಾರ ಚಕ್ರಸಾಲಿ, ಮಾನಪ್ಪ ಲಮಾಣಿ, ಮಹಾಂತೇಶ ಹವಳದ, ಮುತ್ತುರಾಜ ಗಡೆಪ್ಪನವರ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಇಓ ಕೃಷ್ಣಪ್ಪ ಧರ್ಮರ, ಪಿಡಿಓ ಸವಿತಾ ಸೋಮಣ್ಣವರ ಸೇರಿದಂತೆ ಅನೇಕರು ಹಾಜರಿದ್ದರು. ನಾಗರಾಜ ಪೂಜಾರ, ಡಿ.ಡಿ. ಲಮಾಣಿ ನಿರೂಪಿಸಿದರು.
ಶಾಸಕ ಡಾ. ಚಂದ್ರು ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲದಿರುವುದರಿಂದ ಕಂಡ ಅಭಿವೃದ್ಧಿಯ ಕನಸು ನುಚ್ಚುನೂರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಡಳಿತ ಯಂತ್ರವು ಸುಧಾರಣೆಯಾದಾಗ ಮಾತ್ರ ಸರಕಾರದ ಕಾರ್ಯಗಳು ಜನರಿಗೆ ಶೀಘ್ರ ತಲುಪುವಂತಾಗುತ್ತವೆ. ಗ್ರಾ.ಪಂ ಸದಸ್ಯರಿಗೆ ವಯಕ್ತಿಕ ಹಿತಾಸಕ್ತಿಯನ್ನು ಬಿಟ್ಟು ಊರಿನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕೆನ್ನುವ ಮನೋಭಾವನೆ ಬೇಕಾಗಿದೆ. ಗ್ರಾಮ ಪಂಚಾಯಿತಿಯವರು ಉದ್ಯೋಗ ಖಾತ್ರಿ ಯೋಜನೆ ಅನುದಾನವನ್ನು ಬಳಸಿಕೊಳ್ಳಬೇಕು. ಕೇಂದ್ರ ರಾಜ್ಯ ಸರಕಾರಗಳ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡುವದಕ್ಕೆ ಆದ್ಯತೆ ನೀಡಿ, ಪಕ್ಷಬೇಧ ಮರೆತು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ.
– ಜಗದೀಶ ಶೆಟ್ಟರ.
ಮಾಜಿ ಮುಖ್ಯಮಂತ್ರಿ, ಸಂಸದರು.