ಜನಪ್ರತಿನಿಧಿ ತನ್ನನ್ನು ಜನಸೇವಕನೆಂದು ಭಾವಿಸಲಿ

0
Spread the love

ಪ್ರಜಾಪ್ರಭುತ್ವದ ಹೃದಯವೇ ಜನಪ್ರತಿನಿಧಿ ಮತ್ತು ಜನರ ನಡುವಿನ ಸಜೀವ ಸಂಪರ್ಕ. ಜನರಿಂದ ಜನರಿಗಾಗಿ ಎಂಬುದು ಪ್ರಜಾಪ್ರಭುತ್ವದ ಘೋಷಣೆ. ಆದರೆ ಜನರು ತಮ್ಮ ಪ್ರತಿನಿಧಿಗಳನ್ನು ಕೇವಲ ಚುನಾವಣೆಯ ಸಮಯದಲ್ಲಿ ಮಾತ್ರ ನೋಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿ ವಿಚಾರ, ಜನಸಾಮಾನ್ಯರ ಸಮಸ್ಯೆಗಳು, ದೈನಂದಿನ ಗೋಳಾಟಗಳು ಇವೆಲ್ಲವನ್ನು ಆಲಿಸುವ ಬದಲು, ಜನಪ್ರತಿನಿಧಿಗಳು ಹೆಚ್ಚು ಸಮಯವನ್ನು ಪಕ್ಷದ ರಾಜಕೀಯದಲ್ಲಿ, ಅಧಿಕಾರದ ರಾಜಕಾರಣದಲ್ಲಿ ಮತ್ತು ವೈಯಕ್ತಿಕ ಬಲವರ್ಧನೆಗೆ ಮುಡಿಪಾಗಿಟ್ಟಿದ್ದಾರೆ.

Advertisement

ಮಹಾತ್ಮ ಗಾಂಧೀಜಿ ಅವರು ಹೇಳಿರುವ ಮಾತಿಗೆ ಸದ್ಯ ರಾಜಕೀಯ ನಡೆಯುತ್ತಿರುವ ಸ್ಥಿತಿಗತಿಯನ್ನು ನೋಡಿದರೆ ಒಂದಕ್ಕೊಂದು ಸಂಬಂಧವೇ ಇಲ್ಲ ಎನ್ನುವಂತಹ ವಾತಾವರಣ ದೇಶದಲ್ಲಿ ನಿರ್ಮಾಣವಾಗಿದೆ. ಗಾಂಧೀಜಿ ಹೇಳಿದ ಮಾತು, ನಾಯಕನು ಜನರ ಸೇವಕನಾಗಿರಬೇಕು, ಆಳುವವನಾಗಿರಬಾರದು. ಇಂದಿನ ರಾಜಕೀಯ ಪರಿಸ್ಥಿತಿ ಈ ಮಾತಿಗೆ ಎಷ್ಟು ಹೊಂದಿಕೊಂಡಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳುವ ಪ್ರಸಂಗ ಎದುರಾಗಿದೆ.

ಹೌದು, ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅಸ್ತಿತ್ವ ಮತ್ತು ಯಶಸ್ಸು ಜನಪ್ರತಿನಿಧಿಗಳ ಜನಸಂಪರ್ಕದ ಮೇಲೆ ಅವಲಂಬಿತವಾಗಿದೆ. ಮತದಾನದ ಮೂಲಕ ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಆಲಿಸುವುದು, ಅವರಿಗೆ ಸೇವೆ ಸಲ್ಲಿಸುವುದು, ಅಭಿವೃದ್ಧಿಯ ದಿಕ್ಕಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದು ಇವರ ಮುಖ್ಯ ಕರ್ತವ್ಯ. ಆದರೆ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಜನಸಂಪರ್ಕ ದಿನೇ ದಿನೇ ಕುಗ್ಗುತ್ತಿರುವುದು ಕಂಡುಬರುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜನರನ್ನು ಸಂಪರ್ಕಿಸಿ, ನಂತರ ದೂರವಾಗುವ ಪ್ರಕ್ರಿಯೆ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆ ಜನರ ವಿಶ್ವಾಸವನ್ನು ಕುಂದಿಸುತ್ತಿದೆ.

ಮಹಾತ್ಮ ಗಾಂಧೀಜಿಯವರ ರಾಜಕೀಯ ತತ್ವಗಳನ್ನು ಪ್ರಸ್ತುತ ವ್ಯವಸ್ಥೆಗೆ ಹೊಂದಿಸಿ ನೋಡಿದಾಗ ಕೆಲವು ಪ್ರಮುಖ ಅಂಶಗಳು ಸ್ಪಷ್ಟವಾಗುತ್ತವೆ. ಜನಸೇವೆಯೇ ರಾಜಕೀಯದ ಗುರಿ. ಗಾಂಧೀಜಿ ರಾಜಕೀಯವನ್ನು ಅಧಿಕಾರದ ಹಂಬಲವಾಗಿ ನೋಡಲಿಲ್ಲ. ಅವರು ರಾಜಕೀಯವನ್ನು ನೈತಿಕ ಶಕ್ತಿಯ ಕಾರ್ಯಕ್ಷೇತ್ರವೆಂದು ಪರಿಗಣಿಸಿದರು. ಜನರ ದುಃಖ-ಸಂತಾಪಗಳಿಗೆ ಸ್ಪಂದಿಸುವುದು, ಅವರ ಅಭಿವೃದ್ಧಿಗೆ ಶ್ರಮಿಸುವುದು ರಾಜಕಾರಣಿಯ ಕರ್ತವ್ಯವೆಂದು ಅವರು ಸಾರಿದರು. ಅಹಿಂಸೆ ಮತ್ತು ಸತ್ಯ, ರಾಜಕೀಯದಲ್ಲಿ ಸತ್ಯ ಮತ್ತು ಅಹಿಂಸೆ ಅಡಿಪಾಯವಾಗಬೇಕು ಎಂದು ಗಾಂಧೀಜಿ ನಂಬಿದ್ದರು.

ಪ್ರಸ್ತುತ ರಾಜಕೀಯದಲ್ಲಿ ಸುಳ್ಳು ಭರವಸೆಗಳು, ಹಿಂಸೆ, ಧ್ರುವೀಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ತತ್ವಗಳು ಬಹಳ ಪ್ರಸ್ತುತ. ಪ್ರಸ್ತುತ ರಾಜಕೀಯದಲ್ಲಿ ಜನಸಂಪರ್ಕದ ಕೊರತೆ, ಚುನಾವಣೆಯ ನಂತರ ಅನೇಕ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರೊಂದಿಗೆ ಸಂಪರ್ಕ ಕಡಿಮೆ ಮಾಡುತ್ತಾರೆ. ಇದು ಜನರಲ್ಲಿ ಅಸಮಾಧಾನವನ್ನು ಉಂಟುಮಾಡಿ ರಾಜಕೀಯದ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ. ಅಭಿವೃದ್ಧಿಯ ಅಸಮತೋಲನ, ಕೆಲವೆಡೆ ಮಾತ್ರ ಅಭಿವೃದ್ಧಿ ಕಾರ್ಯಗಳು ಕೇಂದ್ರೀಕೃತವಾಗುತ್ತಿವೆ. ಬಡವರು, ಹಿಂದುಳಿದ ವರ್ಗಗಳು ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜನಪ್ರತಿನಿಧಿಗಳು ಕಾರ್ಯಕ್ಕಿಂತ ಹೆಚ್ಚು ಪ್ರಚಾರದಲ್ಲಿ ತೊಡಗಿರುವುದು ಕಂಡು ಬರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆ ಹೆಚ್ಚಾಗಿ, ನೇರ ಸಂಪರ್ಕ ಕಡಿಮೆಯಾಗುತ್ತಿದೆ.

ಇಂದು ಜನಸಂಪರ್ಕ ಕುಂದಿರುವ ಸಂದರ್ಭದಲ್ಲಿ ಗಾಂಧೀಜಿಯ ತತ್ವಗಳು ಸ್ಪಷ್ಟ ಮಾರ್ಗ ತೋರಿಸುತ್ತವೆ. ಪ್ರತಿಯೊಬ್ಬ ಜನಪ್ರತಿನಿಧಿ ತನ್ನನ್ನು ಜನಸೇವಕನೆಂದು ಭಾವಿಸಬೇಕು. ಗ್ರಾಮ ಸ್ವರಾಜ್ಯ, ಗ್ರಾಮೀಣ ಸಮಸ್ಯೆಗಳ ಪರಿಹಾರಕ್ಕೆ ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಅಗತ್ಯ. ಸುಳ್ಳು ಭರವಸೆಗಳ ಬದಲು ನೈಜ ಸಾಧ್ಯತೆಗಳ ಬಗ್ಗೆ ಜನರಿಗೆ ಹೇಳಬೇಕು. ಸರಳ ಜೀವನ, ಜನಪ್ರತಿನಿಧಿಗಳು ಸರಳತೆಯ ಜೀವನ ನಡೆಸಿದರೆ, ಜನರ ವಿಶ್ವಾಸ ಹೆಚ್ಚುತ್ತದೆ.

ಜನಪ್ರತಿನಿಧಿಗಳು ಜನರೊಂದಿಗೆ ನಂಟು ಹೆಚ್ಚಿಸಬೇಕಾದ ಪ್ರಮುಖ ಕಾರಣವೇ ಅಭಿವೃದ್ಧಿ. ಗ್ರಾಮೀಣಾಭಿವೃದ್ಧಿ, ಗ್ರಾಮಗಳಲ್ಲಿ ರಸ್ತೆಗಳು, ವಿದ್ಯುತ್, ಕುಡಿಯುವ ನೀರು, ಆರೋಗ್ಯ ಕೇಂದ್ರ, ಶಾಲೆ ಮುಂತಾದ ಮೂಲಭೂತ ಸೌಲಭ್ಯಗಳ ಕೊರತೆ ಜನರ ಗೋಳಾಟಕ್ಕೆ ಕಾರಣವಾಗಿದೆ. ಗಾಂಧೀಜಿಯವರ ಗ್ರಾಮಸ್ವರಾಜ ತತ್ವವನ್ನು ಆಧರಿಸಿ ಜನಪ್ರತಿನಿಧಿಗಳು ಗ್ರಾಮಸಭೆಗಳಲ್ಲಿ ಪಾಲ್ಗೊಂಡು ಜನರ ಅಭಿಪ್ರಾಯ ಕೇಳಬೇಕು. ನಗರಾಭಿವೃದ್ಧಿ, ನಗರಗಳಲ್ಲಿ ಟ್ರಾಫಿಕ್, ಮಾಲಿನ್ಯ, ನೀರಿನ ಕೊರತೆ, ಕಸದ ನಿರ್ವಹಣೆ ಮುಖ್ಯ ಸಮಸ್ಯೆಗಳಾಗಿವೆ. ನಗರಾಭಿವೃದ್ಧಿ ಯೋಜನೆಗಳಲ್ಲಿ ನಾಗರಿಕರ ಅಭಿಪ್ರಾಯವನ್ನು ಒಳಗೊಳ್ಳುವುದೇ ಜನಸಂಪರ್ಕವನ್ನು ಹೆಚ್ಚಿಸುವ ಉತ್ತಮ ಮಾರ್ಗ. ಸಮಾನತೆಯ ಆರ್ಥಿಕತೆ, ಗಾಂಧೀಜಿ ಬಯಸಿದ ಆರ್ಥಿಕತೆ ಎಲ್ಲರಿಗೂ ಸಮಾನ ಲಾಭ ತಲುಪಿಸುವಂತಿರಬೇಕು.

ಇಂದಿನ ರಾಜಕೀಯದಲ್ಲಿ ಜನಪ್ರತಿನಿಧಿಗಳು ತಮ್ಮ ಪಾತ್ರವನ್ನು ಪುನರ್ವಿಮರ್ಶೆ ಮಾಡಬೇಕಾಗಿದೆ. ಗಾಂಧೀಜಿ ನೀಡಿದ ದಾರಿದೀಪ, ಜನಸಂಪರ್ಕವನ್ನು ದೈನಂದಿನ ಕಾರ್ಯವನ್ನಾಗಿ ಮಾಡುವುದು, ಕ್ಷೇತ್ರದಲ್ಲಿ ನಿರಂತರವಾಗಿ ಹಾಜರಾಗುವುದು, ಸಾರ್ವಜನಿಕ ಸಭೆಗಳು, ಮನೆ-ಮನೆ ಭೇಟಿಗಳು, ಸಮಸ್ಯೆ ಆಲಿಸುವ ವ್ಯವಸ್ಥೆ, ಸೇವಕತ್ವದ ಮನೋಭಾವ, ನೈತಿಕತೆ ಮತ್ತು ಪಾರದರ್ಶಕತೆ, ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ತೋರಿಸುವುದು ಇತ್ಯಾದಿಗಳಿಂದ ಹೊಸ ರಾಜಕೀಯ ಸಂಸ್ಕೃತಿಯನ್ನು ಬೆಳೆಸಬೇಕು.

ಇಂದಿನ ಪ್ರಜಾಸತ್ತಾತ್ಮಕ ವ್ಯವಸ್ಥೆ ಉಳಿಯಬೇಕಾದರೆ, ಜನಪ್ರತಿನಿಧಿಗಳು ಜನರೊಂದಿಗೆ ನೇರ ಸಂಪರ್ಕವನ್ನು ಪುನರುಜ್ಜೀವಗೊಳಿಸಬೇಕು. ಗಾಂಧೀಜಿಯವರ ನುಡಿಗಳು ದಾರಿದೀಪ. ನೀನು ಮಾಡುವ ಪ್ರತಿಯೊಂದು ನಿರ್ಧಾರದಲ್ಲೂ, ಕೊನೆಯ ಸಾಲಿನ ಬಡವನ ಮುಖ ನೆನಪಿಸು. ಆ ನಿರ್ಧಾರ ಅವನಿಗೆ ಏನು ಕೊಡುವುದು ಎಂದು ಪರಿಶೀಲಿಸು. ಇಂದಿನ ರಾಜಕೀಯ ಈ ತತ್ವವನ್ನು ಅಳವಡಿಸಿಕೊಂಡರೆ, ಜನಪ್ರತಿನಿಧಿ–ಜನರ ನಡುವೆ ಅಂತರ ಕಡಿಮೆಯಾಗಿ, ಪ್ರಜಾಪ್ರಭುತ್ವ ಬಲಿಷ್ಠವಾಗುವುದು, ಅಭಿವೃದ್ಧಿಯ ಲಾಭ ಸಮಾನವಾಗಿ ಹಂಚಿಕೆ ಆಗುವುದು.

ಇಂದಿನ ಭಾರತದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದ್ದರೂ, ಅದರ ಗುಣಮಟ್ಟ ಪ್ರಶ್ನಾರ್ಹವಾಗಿದೆ. ಜನಪ್ರತಿನಿಧಿಗಳು ಜನರೊಂದಿಗೆ ನಂಟು ಕಡಿಮೆ ಮಾಡಿಕೊಂಡಿರುವುದರಿಂದ ಜನರಲ್ಲಿ ನಿರಾಸೆ ಹೆಚ್ಚುತ್ತಿದೆ. ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ, ಗ್ರಾಮಸ್ವರಾಜ, ಸೇವಾ ಮನೋಭಾವ, ಸರ್ವಧರ್ಮ ಸಮಭಾವ ತತ್ವಗಳನ್ನು ಆಧಾರವಾಗಿಸಿಕೊಂಡು ಜನಪ್ರತಿನಿಧಿಗಳು ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಳ್ಳಬೇಕು. ಜನಪ್ರತಿನಿಧಿಗಳು ಜನರೊಂದಿಗೆ ನಂಟು ಹೆಚ್ಚಿಸಿದಾಗ, ಜನಸಮಸ್ಯೆಗಳು ನೇರವಾಗಿ ಪರಿಹಾರವಾಗುತ್ತವೆ. ಅಭಿವೃದ್ಧಿ ಸಮಾನವಾಗಿ ತಲುಪುತ್ತದೆ. ಯುವಕರಿಗೆ ನಂಬಿಕೆ ಬರುತ್ತದೆ. ಜನ-ರಾಜಕೀಯ ನಡುವಿನ ಅಂತರ ಕರಗುತ್ತದೆ. ಜನಪ್ರತಿನಿಧಿಗಳು ಜನರೊಂದಿಗೆ ದೂರ ಉಳಿದಾಗ, ಭ್ರಷ್ಟಾಚಾರ ಹೆಚ್ಚುತ್ತದೆ. ಜನರ ನಿರಾಸೆ ತೀವ್ರಗೊಳ್ಳುತ್ತದೆ. ಪ್ರಜಾಪ್ರಭುತ್ವದ ಅರ್ಥ ಕುಗ್ಗುತ್ತದೆ.

ಸಿಕಂದರ ಎಂ.ಆರ್.
ಪತ್ರಕರ್ತರು.

 


Spread the love

LEAVE A REPLY

Please enter your comment!
Please enter your name here