ವಿಜಯಸಾಕ್ಷಿ ಸುದ್ದಿ, ಗದಗ : ಪಂಚಲೋಹಗಳ ಬೀಡು, ಅಪಾರ ಆರ್ಯುವೇದದ ಔಷಧಿಗಳ ಖನಿಜ, ಸಸ್ಯಕಾಶಿ ಹಾಗೂ ವಿಶಿಷ್ಟ ರೀತಿಯ ವನ್ಯ ಜೀವಿಗಳನ್ನು ಹೊಂದಿರುವ, ಶುದ್ಧ ಗಾಳಿ ಬೀಸುವ ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದ ಮಹತ್ವ ತಿಳಿಸಲು ಸರಕಾರ ಮಕ್ಕಳ ಶಾಲಾ ಪಠ್ಯಕ್ರಮದಲ್ಲಿ ಕಪ್ಪತ್ತಗುಡ್ಡದ ವಿಶೇಷತೆಯನ್ನು ಸೇರಿಸಬೇಕೆಂದು ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಜನಪದ ಕಲಾವಿದ ಗವಿಶಿದ್ಧಯ್ಯ ಹಳ್ಳಿಕೇರಿಮಠ ಆಗ್ರಹಿಸಿದ್ದಾರೆ.
ಸ್ಕಂದ ಪುರಾಣದಲ್ಲಿ ಎಪ್ಪತ್ತಗಿರಿಗಿಂತ ಕಪ್ಪತ್ತಗಿರಿ ಮೇಲು ಎಂದು ಸಾರಲಾಗಿದೆ. ಸ್ವಚ್ಛಂದ ಗಾಳಿ ಬೀಸುವ ಹಾಗೂ ಆರ್ಯುವೇದದ ಗಿಡಮೂಲಿಕೆಗಳನ್ನು ಹೊಂದಿರುವ ಕಪ್ಪತ್ತಗುಡ್ಡ ಅತೀ ವೇಗವಾಗಿ ಗಾಳಿ ಬೀಸುವ ಪ್ರದೇಶವೂ ಹೌದು. ಅಲ್ಲಿರುವ ವನ್ಯ ಜೀವಿಗಳು ಅಸಂಖ್ಯ. 1882ರಲ್ಲಿ ಬ್ರಿಟಿಷ್ ಸರಕಾರ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿತ್ತು. ಅಲ್ಲದೇ ಇತ್ತೀಚಿಗೆ ಈ ಭಾಗದ ಅನೇಕ ಪರಿಸರ ಹೋರಾಟಗಾರರ ಫಲವಾಗಿ ಇಂದು ವನ್ಯಜೀವಿಧಾಮವಾಗಿದೆ.
ಕಪ್ಪತ್ತಗುಡ್ಡವನ್ನು ನೋಡಲು ರಾಜ್ಯ, ಹೊರ ರಾಜ್ಯ, ದೇಶಗಳಿಂದಲೂ ಕಿಕ್ಕಿರಿದ ಜನಸ್ತೋಮ ಬರುತ್ತಿದೆ. ಕಪ್ಪತ್ತಗುಡ್ಡದ ಪರಿಸರ ಸಂರಕ್ಷಣೆಯಾಗಬೇಕಿದೆ. ಈ ಭಾಗದ ಜನರ ಜೀವನಾಡಿ ಕಪ್ಪತ್ತಗುಡ್ಡದ ಮಹತ್ವ ತಿಳಿಸಲು ಮಕ್ಕಳ ಶಾಲಾ ಪಠ್ಯಕ್ರಮದಲ್ಲಿ ಕಪ್ಪತ್ತಗುಡ್ಡದ ವಿಶೇಷತೆ ಸೇರ್ಪಡೆ ಮಾಡಬೇಕೆಂದು ಸರಕಾರಕ್ಕೆ ಹಳ್ಳಿಕೇರಿಮಠ ಒತ್ತಾಯಿಸಿದ್ದಾರೆ.