ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಬೆಂಗಳೂರು ಹೊರತುಪಡಿಸಿ ಅತ್ಯತ್ತಮವಾದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ, ಮಹಾತ್ಮ ಗಾಂಧಿ ಕ್ರೀಡಾಂಗಣ ಸೇರಿದಂತೆ ಉನ್ನತಮಟ್ಟದ ಕ್ರೀಡಾ ಸೌಲಭ್ಯಗಳಿದ್ದು, ಇವುಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿರುವ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕರೆ ನೀಡಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಗದಗದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಕುಸ್ತಿ ಮನೆಯಲ್ಲಿ ಎರಡು ದಿನಗಳ ಕಾಲ 15, 17 ಮತ್ತು 23 ವರ್ಷ ವಯೋಮಿತಿಯೊಳಗಿನ ಬಾಲಕ/ಬಾಲಕಿಯರಿಗೆ ಏರ್ಪಡಿಸಲಾಗಿದ್ದ ಅಂತರ ಜಿಲ್ಲಾ ಮಟ್ಟದ ಕ್ರೀಡಾ ವಸತಿ ನಿಲಯಗಳ ಕುಸ್ತಿ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಗದಗ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಬೀನು ಬಾಟ್, ರಾಜು ಬಾಗಡೆ, ವಿಲಾಸ ನೀಲಗುಂದ, ಹರೀಶ ಮುಟಗಾರ, ಪ್ರೇಮಾ ಹುಚ್ಚಣ್ಣವರ, ನೀಲಮ್ಮ ಮಲ್ಲಿಗವಾಡ ಸೇರಿದಂತೆ ಹಲವಾರು ಕ್ರೀಡಾಪಟುಗಳು ಈಗಿನ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದರು.
ಈ ಕುಸ್ತಿ ಪಂದ್ಯಾವಳಿಯಲ್ಲಿ ಗದಗ, ಶಿವಮೊಗ್ಗ, ಬಾಗಲಕೋಟೆ, ಧಾರವಾಡ, ದಾವಣಗೆರೆ, ಉತ್ತರಕನ್ನಡ, ಬೆಳಗಾವಿ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು, ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳ ಪ್ರತಿಭೆ ಹೊರಬರಲು ಈ ಕ್ರೀಡಾಕೂಟ ಅನುಕೂಲಕರವಾಗಿದೆ. ಈ ಕ್ರೀಡಾಕೂಟವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಊಟ, ವಸತಿಯೊಂದಿಗೆ ಕ್ರೀಡಾಕೂಟದ ಆಯೋಜನೆ ಅಚ್ಚುಕಟ್ಟಾಗಿ ಮಾಡಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿ, ಎಲ್ಲ ವಿದ್ಯಾರ್ಥಿಗಳ ಗದಗದ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿ, ಗದಗದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪರಿಚಯ ಮಾಡಿಕೊಳ್ಳಲಿ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಶರಣು ಗೋಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎ. ಯರಗುಡಿ ನಿರೂಪಿಸಿ ವಂದಿಸಿದರು. ವೇದಿಕೆಯಲ್ಲಿ ಗದಗ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ವಸಂತ ಸಿದ್ದಮ್ಮನಹಳ್ಳಿ, ತರಬೇತುದಾರರಾದ ರಾಜು ಫಳಕೆ, ನಾಗರಾಜ, ಶಿವಾನಂದ, ಮಂಜು ಬಾಗಡೆ, ವಿದ್ಯಾ ಕುಲಕರ್ಣಿ, ರೂಪಾ ಗೌಡರ್ ಸೇರಿದಂತೆ ಇತರ ಜಿಲ್ಲೆಗಳ ತರಬೇತುದಾರರು ಮತ್ತು ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಕರ್ನಾಟಕ ಕುಸ್ತಿ ಅಸೋಸಿಯೇಷನ್ ನಿರ್ಣಾಯಕರ ತಂಡದ ಮುಖ್ಯಸ್ಥರಾದ ಡಾ. ವಿನೋದಕುಮಾರ ಮಾತನಾಡಿ, ಈಗಿನ ಕಾಲಮಾನದಲ್ಲಿ ಕ್ರೀಡೆಗಾಗಿ ಸಾಕಷ್ಟು ಅನುಕೂಲಗಳಿದ್ದು, ಅದರ ಉಪಯೋಗ ಪಡೆದುಕೊಂಡು ಕುಸ್ತಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಗದಗ ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾ ಸೌಲಭ್ಯಗಳು ಇದ್ದು, ಅಂತಾರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಂಗಣ, 400 ಮೀ ಸಿಂಥೆಟಿಕ್ ಟ್ರ್ಯಾಕ್, ಫುಟ್ಬಾಲ್ ಪಿಚ್, ಕ್ರಿಕೆಟ್ ನೆಟ್ ಪ್ರ್ಯಾಕ್ಟಿಸ್, ಒಳಾಂಗಣ ಕ್ರೀಡಾಂಗಣಗಳು, ಈಜುಕೊಳಗಳು ಇದ್ದು ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.



