ವಿಜಯಸಾಕ್ಷಿ ಸುದ್ದಿ, ಗದಗ: ವ್ಯಾಸಂಗದಲ್ಲಿ ವಿದ್ಯಾರ್ಥಿಗಳು ಕಷ್ಟಪಟ್ಟು, ಇಷ್ಟದೊಂದಿಗೆ ಅಧ್ಯಯನ ಮಾಡಿ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬೇಕೆಂದು ಫ್ರಾನ್ಸ್ನ ಆರೋಗ್ಯ ಕಾರ್ಯಕರ್ತೆ ಪ್ರಸಿಲ್ಲಾ ರ‍್ರಿ ಹೇಳಿದರು.
ಅವರು ಗದುಗಿನ ಬಿ.ಜಿ. ಅಣ್ಣಿಗೇರಿ ಗುರುಕುಲ ಆಶ್ರಮದಲ್ಲಿ ಶಿಕ್ಷಣ ಪಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸರಸ್ವತಿ ಪೂಜಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಲಿಯಬೇಕು, ಜೀವನದಲ್ಲಿ ಉನ್ನತ ಹುದ್ದೆಯನ್ನು ಪಡೆಯಬೇಕೆಂಬ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಶಿಕ್ಷಣವು ಮೆಟ್ಟಿಲಾಗಬಲ್ಲದು. ಆದ್ದರಿಂದ ವಿದ್ಯಾರ್ಥಿಗಳು ಕಲಿಯುವ ವಯಸ್ಸಿನಲ್ಲಿ ಕಲಿಯುವದನ್ನಷ್ಟೇ ಮಾಡಬೇಕು ಎಂದರು.
ಬಿ.ಜಿ. ಅಣ್ಣಿಗೇರಿ ಅವರು ಒಬ್ಬ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ತಮ್ಮ ನಿವೃತ್ತಿಯ ಬಳಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರೊಂದಿಗೆ ಮಾರ್ಗದರ್ಶನ, ಸಂಸ್ಕೃತಿ, ಸಂಸ್ಕಾರ, ಧರ್ಮ ಮಾರ್ಗದಲ್ಲಿ ಮುನ್ನಡೆಯುವದನ್ನು ರೂಢಿಸಿ ಆದರ್ಶ ವ್ಯಕ್ತಿಗಳಾಗಿರುದನ್ನು ತಿಳಿದು ಬಹಳ ಸಂತೋಷವಾಯಿತು. ಅಂತಹ ಗುರುವಿಗೆ ಗೌರವ ಸಲ್ಲಿಸಬೇಕೆಂದರೆ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳುವುದೇ ಮಾರ್ಗ ಎಂದರು.
ಲಕ್ಮೇಶ್ವರದ ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೇಘಾ ಬೆಲ್ಲದ ಅವರು ಮಾತನಾಡಿ, ನಾನು ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಪಾಠ ಹೇಳಿಸಿಕೊಂಡಿದ್ದೆ. ಅಲ್ಲದೆ ಪ್ರತಿಷ್ಠಾನದಿಂದ ಪ್ರತಿಭಾ ಪುರಸ್ಕಾರ ಪಡೆದು ಇಂದು ಒಂದು ಹುದ್ದೆಯಲ್ಲಿರುವುದು ನನಗೆ ಖುಷಿ ತಂದಿದೆ. ಅಂದು ಪ್ರತಿಭಾ ಪುರಸ್ಕಾರ ಪಡೆದುಕೊಂಡಿದ್ದ ನನಗೆ ಗುರು ಋಣ ತಿರಿಸಬೇಕೆಂಬ ಬಯಕೆ ಇತ್ತು. ಆದ್ದರಿಂದ 10 ಸಾವಿರ ರೂ.ಗಳನ್ನು ಪ್ರತಿಷ್ಠಾನಕ್ಕೆ ದೇಣಿಗೆ ನೀಡಿ ಎಲ್ಲ ವಿದ್ಯಾರ್ಥಿಗಳಿಗೆ ಉಪಹಾರದ ಸೇವೆಗೆ ಅವಕಾಶ ದೊರೆತಿರುವದು ನನ್ನ ಭಾಗ್ಯ ಎಂದರು.
ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷರಾದ ಶಿವಕುಮಾರ ಪಾಟೀಲ ಮಾತನಾಡಿ, ಬಿ.ಜಿ. ಅಣ್ಣಿಗೇರಿ ಗುರುಗಳ ತರುವಾಯ ಆಶ್ರಮವನ್ನು ಪ್ರತಿಷ್ಠಾನವು ಶೈಕ್ಷಣಿಕ ಹಿತದೃಷ್ಟಿಯಿಂದ ಮುನ್ನಡೆಸಿಕೊಂಡು ಬಂದಿದ್ದು, ಪ್ರತಿಷ್ಠಾನದ ಪದಾಧಿಕಾರಿಗಳ, ಶಿಷ್ಯ ಬಳಗದ ಸಹಕಾರದೊಂದಿಗೆ ಮುನ್ನಡೆದಿದೆ. ಇಲ್ಲಿ ಶಿಕ್ಷಕ-ಶಿಕ್ಷಕಿಯರು ಬಂದು ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಟ್ರಸ್ಟ್ ನಿರ್ದೇಶಕ ಡಾ. ಬಸವರಾಜ ಚೆನ್ನಪ್ಪಗೌಡ್ರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪಾವನಿ ಪ್ರಾರ್ಥಿಸಿದಳು, ಶಿಕ್ಷಕಿ ಜ್ಯೋತಿ ವಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪ್ರಸನ್ನಕುಮಾರ ಗುತ್ತಿ ನಿರೂಪಿಸಿದರು. ಶಿಕ್ಷಕಿ ಮಂಜುಳಾ ತುಮ್ಮರಮಟ್ಟಿ ವಂದಿಸಿದರು.
ಸ್ವಾಮಿ ನಿಷ್ಠೆಯ ಶ್ವಾನ
ಬಿ.ಜಿ. ಅಣ್ಣಿಗೇರಿ ಗುರುಗಳು ಸಾಕಿದ್ದ ಶ್ವಾನ ಗುರುಗಳು ಲಿಂಗೈಕ್ಯರಾದ ದಿನ ಕಣ್ಣೀರಿಟ್ಟು ಉಪವಾಸವಿತ್ತು. ಅಂದಿನಿಂದ ಆಶ್ರಮದಲ್ಲಿ ಸ್ವಾಮಿ ನಿಷ್ಠೆಯ ಪ್ರತೀಕವಾಗಿದೆ. ಸಭೆ-ಸಮಾರಂಭವಿದ್ದಾಗ ವೇದಿಕೆಯ ಮುಂಚೂಣಿಯಲ್ಲಿರುವದು ಆಶ್ರಮದ ಗುರುಗಳ, ವಿದ್ಯಾರ್ಥಿಗಳ ಮೆಚ್ಚುಗೆಯೊಂದಿಗೆ ನಂಬಿಗಸ್ತ ಪ್ರಾಣಿ ಎಂಬುದನ್ನು ಸಾಬೀತುಗೊಳಿಸಿದೆ. ಅತಿಥಿಗಳೊಂದಿಗೆ ತಾನೂ ಫೋಟೋ ಕ್ಲಿಕ್ಕಿಸಿಕೊಂಡಿದ್ದನ್ನು ಕಾಣಬಹುದು ಎಂದೆನ್ನುತ್ತಾರೆ ಶಿವಕುಮಾರ ಪಾಟೀಲ.