ಕನ್ನಡದ ಕಹಳೆ ಎಲ್ಲೆಡೆ ಮೊಳಗಲಿ: ಶಾಸಕ ಡಾ. ಚಂದ್ರು ಲಮಾಣಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕನ್ನಡ ಭಾಷೆ ಸಾವಿರಾರು ವರ್ಷಗಳ ದೀರ್ಘ ಇತಿಹಾಸ ಮತ್ತು ಪರಂಪರೆಯನ್ನು ಒಳಗೊಂಡು ಶ್ರೀಮಂತವಾಗಿದೆ. ಇಂತಹ ಭಾಷೆಯನ್ನು ಉಳಿಸಿ-ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗರದ್ದಾಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

Advertisement

ಅವರು ಶನಿವಾರ ಶಿರಹಟ್ಟಿ ಪಟ್ಟಣದ ಎಸ್.ಎಂ. ಡಬಾಳೆ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಶಿರಹಟ್ಟಿ ಇವರ ವತಿಯಿಂದ ಜರುಗಿದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಹಸೀಲ್ದಾರ ಕೆ. ರಾಘವೇಂದ್ರ ರಾವ್ ಮಾತನಾಡಿ, ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಎಂಬ ಕಾನೂನನ್ನು ಸರ್ಕಾರ ಕಡ್ಡಾಯಗೊಳಿಸಬೇಕಾಗಿದೆ. ಶಿಕ್ಷಕರು ಹಾಗೂ ಇಲಾಖೆಯು ತಾಯ್ನಾಡಿನ ಬಗ್ಗೆ ಹೆಮ್ಮೆ ಮೂಡಿಸಲು ಸದಾ ಪ್ರಯತ್ನಿಸಬೇಕು. ಆಗ ಮಾತ್ರ ಸ್ವಾಭಿಮಾನ ಸಹಜವಾಗಿ ಮೂಡುತ್ತದೆ. ಕನ್ನಡ ಭಾಷೆ ಬಗ್ಗೆ ಒಂದು ರೀತಿ ಅಸಡ್ಡೆಯಂತೂ ವ್ಯಾಪಕವಾಗಿ ಹರಡಿದೆ. ಕನ್ನಡ ನಾಡಿನ ಹಿರಿಮೆ, ಗರಿಮೆ, ಪುರಾತನ ಇತಿಹಾಸ, ನೆಲ, ಜಲ, ಇತರೆ ಸಂಪತ್ತಿನ ಬಗ್ಗೆ ಅರಿವಿರಬೇಕು. ಶಿಕ್ಷಕರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಈ ಕುರಿತು ತಿಳುವಳಿಕೆ ನೀಡಬೇಕು ಎಂದು ಹೇಳಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಫಕ್ಕಿರೇಶ ರಟ್ಟಿಹಳ್ಳಿ, ಬಸವರಾಜ ವಡವಿ, ಶಶಿ ಪೂಜಾರ, ಸಂತೋಷ ತೋಡೇಕಾರ, ಹಸನ್ ತಹಸೀಲ್ದಾರ, ತಾ.ಪಂ ಇಒ ರಾಮಪ್ಪ ದೊಡ್ಡಮನಿ, ಬಿಇಒ ಎಚ್. ನಾಣಕೀ ನಾಯಕ, ಪಿಎಸ್‌ಐ ಈರಪ್ಪ ರಿತ್ತಿ, ಕೃಷಿ ಇಲಾಖೆಯ ರೇವಣೆಪ್ಪ ಮನಗೂಳಿ, ರಾಮಪ್ಪ ಪೂಜಾರ, ರಂಗಪ್ಪ ಕಾಂಬ್ಳೆ, ಸಂತೋಷ ಅಸ್ಕಿ ಮುಂತಾದವರು ಉಪಸ್ಥಿತರಿದ್ದರು.

ವಿಶ್ವ ಮಾನ್ಯವಾಗಿರುವ ಕನ್ನಡ ನಾಡು, ನುಡಿ, ಸಂಸ್ಕೃತಿ, ನೆಲ, ಜಲ, ಭಾಷೆಯನ್ನು ಪೋಷಿಸಿ, ಅಭಿವೃದ್ಧಿಪಡಿಸುವ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಕಂಕಣಬದ್ಧರಾಗೋಣ. ಸಾಹಿತ್ಯದ ಜೊತೆಗೆ ಇತರ ಭಾಷೆಯನ್ನು ಗೌರವಿಸೋಣ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಎಲ್ಲರೂ ಶ್ರಮಿಸೋಣ. ಕನ್ನಡದ ಕಹಳೆ ಎಲ್ಲೆಡೆ ಮೊಳಗಬೇಕು. ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ಎಲ್ಲ ಮಹನೀಯರ ಕೊಡುಗೆಯನ್ನು ಸ್ಮರಿಸೋಣ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.


Spread the love

LEAVE A REPLY

Please enter your comment!
Please enter your name here