ವಿಜಯಸಾಕ್ಷಿ ಸುದ್ದಿ, ಗದಗ : ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯ ಗದಗ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಮತ್ತು ಮಹಾವಿದ್ಯಾಲಯದ ವುಮೆನ್ಸ್ ಸೆಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ `ವಿಶ್ವ ರಂಗಭೂಮಿ ದಿನಾಚರಣೆ’ಯನ್ನು ಹಮ್ಮಿಕೊಳ್ಳಲಾಗಿತ್ತು.
ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಸೆಮಿನಾರ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಕಲಾವಿದೆ ಗಾಯತ್ರಿ ಹಿರೇಮಠ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಲಾವಿದರ ಬದುಕು, ಬವಣೆ, ರಂಗಭೂಮಿಯಲ್ಲಿ ಆಗುತ್ತಿರುವ ಆಧುನಿಕ ಬದಲಾವಣೆಗಳು, ಕನ್ನಡ ರಂಗಭೂಮಿಯ ಹೊಸ ಪ್ರಯತ್ನಗಳು, ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಯ ಸಂಕ್ಷೀಪ್ತ ಹಿನ್ನೆಲೆಗಳನ್ನು ಮೆಲುಕುಹಾಕಿ, ಬದಲಾದ ಕಾಲಘಟ್ಟದಲ್ಲಿ ರಂಗಭೂಮಿ ಕಲಾವಿದರು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಸುನಂದಾ ಹಿರೇಮಠ ಮಾತನಾಡಿ, ಗಂಡು ಕಲೆಯಾದ ನಾಟಕರಂಗದಲ್ಲಿ ಹೆಣ್ಣೊಬ್ಬಳು ಸಾಧನೆ ಮಾಡುವುದು ಸುಲಭದ ಕೆಲಸವಲ್ಲ. ಹೆಣ್ಣುಮಕ್ಕಳ ಪಾತ್ರವನ್ನು ಗಂಡು ಮಕ್ಕಳೇ ನಿರ್ವಹಿಸುತ್ತಿದ್ದ ಒಂದು ಕಾಲವಿತ್ತು. ಆದರೆ ಇವತ್ತಿಗೂ ಕೂಡ ತಮ್ಮ ತಾಯಿಯವರಾದ ಗಾಯತ್ರಿ ಹಿರೇಮಠ ಅವರು ಹೆಣ್ಣಾಗಿಯೂ ಕೂಡ ಗಂಡು ಪಾತ್ರವನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಬಲ್ಲರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗದಗ ತಾಲೂಕಾ ಕ.ಸಾ.ಪ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ, ರಂಗಭೂಮಿ ನಡೆದು ಬಂದ ದಾರಿಯನ್ನು ಮತ್ತು ಕನ್ನಡದಲ್ಲಿ ವಿಶೇಷವಾಗಿ ಮಹಿಳೆಯರು ಮಾಡಿರುವ ಸಾಧನೆಯನ್ನು ನೆನಪಿಸಿಕೊಂಡರು.
ಕಸಾಪ ಸಹಕಾರ್ಯದರ್ಶಿ ವಿಶ್ವನಾಥ ಬೇಂದ್ರೆ ಮಾತನಾಡಿ, ಮನುಷ್ಯನಿಗೆ ಕಲೆಗಳ ಅಗತ್ಯತೆಯ ಕುರಿತು ತಿಳಿಸುತ್ತ, ಓದು-ಬರಹದ ಜೊತೆಗೆ ಮನಸ್ಸನ್ನು ಸ್ಥಿರಗೊಳಿಸಲು, ಚಂಚಲತೆಯನ್ನು ಹೋಗಲಾಡಿಸಲು ಕಲೆಯ ಅಗತ್ಯ ಇಂದಿನ ವಿದ್ಯಾರ್ಥಿಗಳಿಗೆ ಇದೆ ಎಂದರು.
ಮಹಾವಿದ್ಯಾಲಯದ ವಿದ್ಯಾರ್ಥಿ ಶಿವಮೂರ್ತಯ್ಯ ರೇಷ್ಮಿ ಕನ್ನಡ ರಂಗಭೂಮಿ ಕುರಿತು ಮಾತನಾಡುತ್ತ, ಗೊಂಬೆಯಾಟ, ತೊಗಲು ಗೊಂಬೆಯಾಟ, ಬಯಲಾಟ, ಯಕ್ಷಗಾನ, ದೊಡ್ಡಾಟ, ಕನ್ನಡ ಜನಪದದ ಮೂಲ ರೂಪಗಳೇ ಆಗಿವೆ. ಜನಪದ ರಂಗಭೂಮಿಯ ಮೂಲ ಅಂಶಗಳು ದೈವಾರಾಧನೆಯಲ್ಲಿಯೇ ಕಂಡುಬರುತ್ತದೆ. ವೈದ್ಯರ ಕುಣಿತ, ನಾಗನೃತ್ಯಗಳು ಕರಾವಳಿಯ ಹಳ್ಳಿಗಳಲ್ಲಿ ಕಾಣಸಿಗುತ್ತವೆ ಎಂದರು.
ಫಕ್ರುದ್ದೀನ, ಶಶಿಧರ ಮಾಳೋಜಿ, ಓಂಕಾರ ತೋರಟ್, ಬಸಪ್ಪ, ಪೂರ್ಣಿಮಾ, ಪ್ರತಿಭಾ ಪವಾರ, ವಿಜಯಲಕ್ಷ್ಮಿ ಬಿ., ಅದಿತಿ ನಾಡಿಗೇರ್, ಪ್ರಜ್ವಲ್ ಜಡಿಮಠ, ಶೇಷಾದ್ರಿ ಕುಲಕರ್ಣಿ ಸಹಕಾರ ನೀಡಿದರು. ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಗಳು, ಕಸಾಪ ಪದಾಧಿಕಾರಿಗಳು, ಸದಸ್ಯರು, ಡಾ. ಶೈಲಜಾ ಮುದೇನಗುಡಿ, ಡಾ. ಅಶ್ವಿನಿ ಅರಳಿ, ಪ್ರೊ. ಮುಕ್ತಾ ಪಾಟೀಲ, ಪ್ರೊ. ನೀತಾ, ಪ್ರೊ. ರೇಖಾ, ತನುಶ್ರೀ, ಪ್ರೊ. ಸುಜಾತ ಬೆಟಗೇರಿ ಹಾಜರಿದ್ದರು.
ತೇಜಸ್ವಿನಿ ಮಡಿವಾಳರ ಪ್ರಾರ್ಥಿಸಿದರು. ಮಂಜುನಾಥ ಸಿಂಗಣ್ಣವರ ಸ್ವಾಗತಿಸಿದರು. ಮಾನ್ಯ ಶೆಟ್ಟಿ, ಆಕಾಂಕ್ಷ ಕಲ್ಯಾಣಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಜ್ಯೋತಿ ಎಸ್, ಶೃತಿ ನಿರೂಪಿಸಿದರು. ಭೂಮಿಕ ಹಿರೇಮಠ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ. ಈರಣ್ಣ ಕೊರಚಗಾಂವ್ ಮಾತನಾಡಿ, ರಂಗಭೂಮಿಯ ಕುರಿತು ಮಹಾವಿದ್ಯಾಲಯದಲ್ಲಿ ಯಾವುದೇ ಕಾರ್ಯಕ್ರಮ ಆಯೋಜನೆಯಾಗಿರಲಿಲ್ಲ. ಈ ಬೆಳವಣಿಗೆ ನಿಜಕ್ಕೂ ಸ್ವಾಗತಾರ್ಹ. ಜಿಲ್ಲಾ ಕಸಾಪ ಮತ್ತು ಗದಗ ತಾಲೂಕಾ ಕಸಾಪ ಈ ಭಾಗದಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಶನಿವಾರ ಸಂಜೆ ಕಾರ್ಯಕ್ರಮಗಳು ನಡೆಯುತ್ತವೆ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಪಾಲ್ಗೊಳ್ಳಬೇಕೆಂದು ಹೇಳಿದರು.