ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಮುಂದಿನ ಪೀಳಿಗೆಗೆ ವಚನಕಾರರ ಪರಿಚಯ, ವಚನಗಳಲ್ಲಿನ ಆದರ್ಶ ಮೌಲ್ಯಗಳು ಹಾಗೂ ಅವರು ನಡೆದು ಬಂದ ದಾರಿಯ ಕುರಿತು ತಿಳಿಸುವ ಉದ್ದೇಶದಿಂದ ಆಗಸ್ಟ್ 24ರಂದು ಶ್ರೀ ತೋಂಟದ ಸಿದ್ಧಲಿಂಗ ಕಲ್ಯಾಣ ಮಂಟಪದಲ್ಲಿ ಜರುಗುವ ಜಿಲ್ಲಾ ಕದಳಿ ಮಹಿಳಾ ದ್ವಿತೀಯ ಸಮ್ಮೇಳನದ ಅಂಗವಾಗಿ ಚರ್ಚಿಸಲು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಗದಗ ತಾಲೂಕ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಶಸಾಪ ಮಾಜಿ ಕಾರ್ಯದರ್ಶಿ ರಾಜಶೇಖರ ದಾನರಡ್ಡಿ ಶರಣ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯ ಕುರಿತು ಮಾತನಾಡಿದರು. ಗದಗ ತಾಲೂಕು ಶಸಾಪ ಅಧ್ಯಕ್ಷ ಶರಣ ಪ್ರಕಾಶ ಅಸುಂಡಿ, ಪರಿಷತ್ತಿನ ಅಜೀವ ಸದಸ್ಯ ಶರಣ ಪಿ.ಟಿ. ನಾರಾಯಣಪುರ, ಸಭೆಯ ಅಧ್ಯಕ್ಷತೆ ವಹಿಸಿದ್ದ ಶರಣೆ ರತ್ನಕ್ಕ ಪಾಟೀಲ ಮಾತನಾಡಿದರು.
ಶರಣೆ ಡಾ. ಗಿರಿಜಾ ಹಸಬಿ ವಚನ ಪ್ರಾರ್ಥನೆಗೈದರು. ಗದಗ ತಾಲೂಕು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶರಣೆ ಸುಲೋಚನಾ ಎಂ. ಐಹೊಳಿ ಸ್ವಾಗತಿಸಿದರು. ಶರಣೆ ಕಲಾವತಿ ಸಿ. ಹನಮಂತಗೌಡರ ನಿರೂಪಿಸಿದರು. ಕದಳಿ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಶರಣೆ ರೇಣುಕಾ ವ್ಹಿ.ಕರೇಗೌಡ್ರ ಶರಣು ಸಮರ್ಪಣೆಗೈದರು. ಸಭೆಯಲ್ಲಿ ಗದಗ ತಾಲೂಕಾ ಕದಳಿ ಮಹಿಳಾ ವೇದಿಕೆಯ ಕಾರ್ಯಾದರ್ಶಿ ಜ್ಯೋತಿ ಹೇರಲಗಿ, ಅಕ್ಕಮಹಾದೇವಿ ಚಟ್ಟಿ, ಮಂಜುಳಾ ಅಕ್ಕಿ, ಲಲಿತಾ ಉಮನಾಬಾದಿ, ನಿರ್ಮಲಾ ಪಾಟೀಲ, ಡಾ. ದೀಪಾ ಮೂರಶಿಳ್ಳಿನ, ಶಿವಲೀಲಾ ಅಕ್ಕಿ, ಶರಣರಾದ ಎಸ್.ಪಿ. ದೊಡ್ಡಣ್ಣವರ, ಎನ್.ಎಂ. ಪವಾಡಿಗೌಡ್ರ, ಎಸ್.ಬಿ. ಅಂಗಡಿ, ಎಸ್.ಎ. ಮುಗದ, ಕೆ.ಎಚ್. ಬೇಲೂರ, ಬಸವರಾಜ ವಾರಿ, ಮಾಂತೇಶ ಅಂಗಡಿ, ಬೂದಪ್ಪ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಶರಣರ ವಚನ ಸಾಹಿತ್ಯವನ್ನು, ವಚನಕಾರರ ಕೊಡುಗೆಯನ್ನು, ಉಪನ್ಯಾಸ, ವಿಚಾರಗೋಷ್ಠಿ, ಚಿತ್ರಪ್ರದರ್ಶನಗಳ ಮೂಲಕ ಹಾಗೂ ವಚನಗಳ ಮೌಲ್ಯಗಳನ್ನು ಕಲಾತಂಡದವರ ಮೂಲಕ ತಿಳಿಸುವ ಪ್ರಯತ್ನ ನಡೆಯಬೇಕು. ರೂಪಕ, ನೃತ್ಯ, ವೇಷ-ಭೂಷಣಗಳ ಮೂಲಕ ವಚನಕಾರರ ಪರಿಚಯವನ್ನು ಮಾಡಿಕೊಡುವ ವಿಚಾರವಾಗಿ ಸಭೆಯಲ್ಲಿ ಚರ್ಚಿಸಲಾಯಿತು.



