ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ರಾಜಕೀಯ ಹಾಗೂ ಅಧಿಕಾರ ಹಂಚಿಕೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸಿ, ಈ ಭಾಗದ ಮುಸ್ಲಿಂ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ (ರಿ.) ಆಗ್ರಹಿಸಿದೆ.
ಹುಬ್ಬಳ್ಳಿಯಲ್ಲಿ ನಡೆದ ಮಹಾಸಭಾದ ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ, ಸಚಿವ ಸಂಪುಟದಲ್ಲಿ ದಕ್ಷಿಣ ಕರ್ನಾಟಕದ ಶಾಸಕರಿಗೆ ಹೆಚ್ಚಿನ ಅವಕಾಶ ದೊರೆತಿದ್ದು, ಉತ್ತರ ಕರ್ನಾಟಕದ ಶಾಸಕರಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿರುವುದು ಈ ಭಾಗದ ಜನರಲ್ಲಿ ನಿರಾಸೆ ಮೂಡಿಸಿದೆ ಎಂದರು.
ಉತ್ತರ ಕರ್ನಾಟಕದ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷದ ಕಷ್ಟದ ದಿನಗಳಲ್ಲೂ ನಿಷ್ಠೆಯಿಂದ ಬೆಂಬಲಿಸಿ, ಪಕ್ಷದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದೆ. ಚುನಾವಣಾ ಸಂದರ್ಭದಲ್ಲಿ ಸಮುದಾಯದ ಬೆಂಬಲವನ್ನು ಪಡೆಯುವ ಪಕ್ಷ, ಅಧಿಕಾರ ಮತ್ತು ಅವಕಾಶಗಳ ಹಂಚಿಕೆಯಲ್ಲೂ ಸಮುದಾಯದ ಕೊಡುಗೆಯನ್ನು ಪರಿಗಣಿಸಬೇಕು ಎಂದು ಮಹಾಸಭಾ ಒತ್ತಾಯಿಸಿದೆ.
ಕಿತ್ತೂರು ಕರ್ನಾಟಕ ಭಾಗದಲ್ಲಿ ಹಲವು ವರ್ಷಗಳಿಂದ ಮುಸ್ಲಿಂ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ದೊರೆಯದಿರುವುದು ಹಾಗೂ ರಾಜ್ಯಮಟ್ಟದ ನಿಗಮ-ಮಂಡಳಿಗಳಲ್ಲೂ ಸಮರ್ಪಕ ಪ್ರಾತಿನಿಧ್ಯ ಸಿಗದಿರುವುದು ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಾರಿ ಅರ್ಹತೆ, ಸೇವೆ ಹಾಗೂ ಜನಪ್ರತಿನಿಧಿತ್ವದ ಆಧಾರದಲ್ಲಿ ಸಮರ್ಥ ಮುಸ್ಲಿಂ ನಾಯಕರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.
ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಅಧ್ಯಕ್ಷರು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಉತ್ತರ ಕರ್ನಾಟಕದ ಅರ್ಹ ಮುಸ್ಲಿಂ ನಾಯಕರಿಗೆ ವಿಧಾನ ಪರಿಷತ್ (ಎಂಎಲ್‌ಸಿ) ಸ್ಥಾನ ಹಾಗೂ ರಾಜ್ಯಮಟ್ಟದ ನಿಗಮ-ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಮಹಾಸಭಾ ಮನವಿ ಮಾಡಿದೆ.
ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಉತ್ತರ ಕರ್ನಾಟಕದ ಶಾಸಕರು ಹಾಗೂ ಜನಪ್ರತಿನಿಧಿಗಳು ಪಕ್ಷದ ವರಿಷ್ಠರ ಮುಂದೆ ಈ ಭಾಗದ ಮುಸ್ಲಿಂ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಬೇಕು ಎಂದು ಸಭೆಯಲ್ಲಿ ಕರೆ ನೀಡಲಾಯಿತು.
ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಆಬೀದ್ ಜೋಡಗೇರಿ, ರಾಜ್ಯ ಸಹ ಕಾರ್ಯದರ್ಶಿ ಎಸ್.ಎಂ. ರೋಣ, ಎಂ.ಡಿ. ರಫೀಕ್ ಜಮಾದಾರ್, ಇಸ್ಮಾಯಿಲ್ ಸಾಬ್ ಆಗಸನಕಟ್ಟಿ, ಎ.ಎಫ್. ರಶ್ಮಿ, ಅಬ್ದುಲ್ ಮುನಾಫ್ ಖಾಜಿ, ಅಸ್ಲಂ ನಾಲಬಂದ, ಮಜೀದ್ ಮನಿಕನಗರ ಸೇರಿದಂತೆ ಮಹಾಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಾವು ಯಾರ ಹಕ್ಕನ್ನೂ ಕಸಿದುಕೊಳ್ಳಲು ಬಯಸುವುದಿಲ್ಲ, ನಮ್ಮ ಪಾಲಿನ ನ್ಯಾಯವನ್ನು ಕೇಳುತ್ತಿದ್ದೇವೆ. ಅಧಿಕಾರ ಹಂಚಿಕೆಯಲ್ಲಿ ಪ್ರಾದೇಶಿಕ ಸಮತೋಲನ ಇರಬೇಕು. ಉತ್ತರ ಕರ್ನಾಟಕದ ಧ್ವನಿಗೂ ಅಧಿಕಾರದ ಬಾಗಿಲು ತೆರೆಯಬೇಕು.
— ಮಹ್ಮದಶಫಿ ನಾಗರಕಟ್ಟಿ, ರಾಜ್ಯಾಧ್ಯಕ್ಷ



