ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರರನ್ನು ಕಾರ್ಗಿಲ್ ವಿಜಯ ದಿನದಂದು ಸ್ಮರಣೆ ಮಾಡುವದು ಅವಶ್ಯವಾಗಿದೆ. ಕಾರ್ಗಿಲ್ ವಿಜಯೋತ್ಸವ ಈ ದೇಶದ ಸೈನಿಕರ ಸಾಹಸದ ಪ್ರತೀಕವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಕಾರ್ಗಿಲ್ ವಿಜಯ ದಿವಸದ ನಿಮಿತ್ತ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಜಿ ಸೈನಿಕರನ್ನು ಸನ್ಮಾನಿಸಿ ಮಾತನಾಡಿದರು.
ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ನಮ್ಮ ದೇಶದ ಘನತೆ, ಸಾಹಸವನ್ನು ಎತ್ತಿ ಹಿಡಿದಿದ್ದರು. ಯುದ್ಧದಲ್ಲಿ ಭಾರತ ತನ್ನ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಬಲಿಷ್ಠವಾಗಿದೆ ಎಂಬ ಸಂದೇಶವನ್ನು ಜಗತ್ತಿಗೆ ತೋರಿಸಿತ್ತು. ಹೀಗಾಗಿ ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಗುತ್ತಿದೆ. ಇವರ ತ್ಯಾಗ, ಬಲಿದಾನ, ದೇಶಪ್ರೇಮ ಖಂಡಿತಾ ಎಲ್ಲಾ ಭಾರತೀಯರಿಗೂ ಸ್ಫೂರ್ತಿಯ ದಾರಿದೀಪ. ಸೈನಿಕರನ್ನು ದೇಶದ ಪ್ರತಿಯೊಬ್ಬರೂ ಸ್ಮರಿಸಿಕೊಳ್ಳಬೇಕು. ತಾಯಿ ನೆಲ ಸಂಕಷ್ಟದಲ್ಲಿದ್ದಾಗ ಸಾವಿಗೂ ಅಂಜದೆ ಹೋರಾಡಿದ ಯೋಧರನ್ನು ಸ್ಮರಿಸೋಣ. ದೇಶಕ್ಕಾಗಿ ಪ್ರಾಣಾರ್ಪಣೆಗೈದ ಕೆಚ್ಚೆದೆಯ ವೀರರ ತ್ಯಾಗ ಎಂದಿಗೂ ಅಮರ ಎಂದರು.
ಸನ್ಮಾನ ಸ್ವೀಕರಿಸಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿ.ಎಸ್. ಹಿರೇಮಠ ಮಾತನಾಡಿ, ಯೋಧರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿರುತ್ತಾರೆ. ಯೋಧರ ತ್ಯಾಗ, ಬಲಿದಾನದ ಬಗ್ಗೆ ನಾಗರಿಕರಿಗೆ ತಿಳಿಸುವ ಕೆಲಸ ಆಗಬೇಕಿದೆ. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ದೇಶಭಕ್ತಿಯನ್ನು ಬೆಳೆಸುವ ಕಾರ್ಯವಾಗಬೇಕು ಎಂದು ಹೇಳಿದರು.
ಹಿರಿಯ ಮುಖಂಡ ಪೂರ್ಣಾಜಿ ಕರಾಟೆ ಮಾತನಾಡಿ, ನೆಲ-ಜಲ ಕಾಯುವ ಕೆಲಸವನ್ನು ಯೋಧರು ಮಾಡುತ್ತಾರೆ. ಅಂತಹ ವೀರ ಯೋಧರನ್ನು ಎಲ್ಲರೂ ನೆನೆಯಬೇಕು ಎಂದರು.
ಈ ವೇಳೆ ಎನ್.ಎನ್. ನೆಗಳೂರ, ಎನ್.ಆರ್. ಸಾತಪುತೆ, ಶಿರಹಟ್ಟಿ ಬಿಜೆಪಿ ಮಂಡಳದ ಪ್ರ.ಕಾರ್ಯದರ್ಶಿ ಅನಿಲ ಮುಳಗುಂದ, ನೀಲಪ್ಪ ಹತ್ತಿ, ದುಂಡೇಶ ಕೊಟಗಿ, ಗಂಗಾಧರ ಮೆಣಸಿನಕಾಯಿ, ಶಕ್ತಿ ಕತ್ತಿ, ವಿಜಯ ಕುಂಬಾರ, ಮಂಜುನಾಥ ಗದಗ, ಪ್ರವೀಣ ಬೋಮಲೆ, ನವೀನ ಹಿರೇಮಠ, ಕಲ್ಲಪ್ಪ ಹಡಪದ, ಬಸವರಾಜ ಕುಂಬಾರ, ವಿಜಯ ಮೆಕ್ಕಿ, ಭೀಮಣ್ಣ ಯಂಗಾಡಿ, ಜಗದೀಶಗೌಡ ಪಾಟೀಲ, ಪರಶುರಾಮ ಇಮ್ಮಡಿ, ಸಂಜೀವ ದೇಸಾಯಿ, ತುಕ್ಕಪ್ಪ ಪೂಜಾರ ಮುಂತಾದವರಿದ್ದರು.
ಯೋಧರೆಂದರೆ ಅವರು ಬರೀ ವ್ಯಕ್ತಿಗಳಲ್ಲ. ಅವರು ಶಕ್ತಿ, ನಮ್ಮ ಹೆಮ್ಮೆ, ಸೇನೆಯ ಕೀರ್ತಿ. ಈ ವೀರರಿಂದಾಗಿ ಭಾರತ ಎಂದೆಂದಿಗೂ ಸುರಕ್ಷಿತ. ನಮ್ಮ ದೇಶದ ಸಮಗ್ರತೆಗೆ, ಗೌರವ, ಸುರಕ್ಷತೆಯ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ನಿಲ್ಲಬೇಕು. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಿಯ ಸೈನ್ಯಕ್ಕೆ ಬಲ ತುಂಬುವ ಕಾರ್ಯ ಮಾಡಿದ್ದಾರೆ ಎಂದ ಶಾಸಕ ಡಾ. ಚಂದ್ರು ಲಮಾಣಿ, ವೀರಯೋಧರನ್ನು ಪ್ರತಿಯೊಬ್ಬ ಭಾರತೀಯರೂ ಸ್ಮರಣೆ ಮಾಡಬೇಕೆಂದು ಹೇಳಿದರು.