ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಹಿಂದೂ ಸಮ್ಮೇಳನ ಸಮಿತಿಯ ವತಿಯಿಂದ ಶನಿವಾರ ಪಟ್ಟಣದಲ್ಲಿ ನಡೆದ ಹಿಂದೂ ಸಮಾವೇಶಕ್ಕೂ ಮುಂಚೆ ನಡೆದ ಶೋಭಾಯಾತ್ರೆಯು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಕೊಂತಿ ಮಲ್ಲಪ್ಪನ ದೇವಸ್ಥಾನದ ಎದುರು ಬೃಹತ್ ಶೋಭಾಯಾತ್ರೆಗೆ ನರೇಗಲ್ಲ ಹಿರೇಮಠದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು. ನರೇಗಲ್ಲ ಹೋಬಳಿಯ 21 ಗ್ರಾಮಗಳಿಂದ ಆಗಮಿಸಿದ್ದ ಎಲ್ಲ ಹಿಂದೂಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಯಾತ್ರೆಗೆ ವಿಶೇಷ ಮೆರುಗು ನೀಡಿದರು.
ಗೊಂಬೆ ಕುಣಿತ, ಹನುಮಂತನ ವೇಷ, ಮಹಿಳೆಯರ ಡೊಳ್ಳು, ಜಾಂಜ್ ಮೇಳ ಮುಂತಾದವುಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದ್ದವು. ಮಹಿಳೆಯರು ಮತ್ತು ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ಮೆರವಣಿಗೆಯುದ್ದಕ್ಕೂ ಸಾಗಿದರು. ಅದರಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮಂತ, ಇತ್ಯಾದಿ ಮಹಾನುಭಾವರ ವೇಷಭೂಷಣಗಳು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರುಗಳ ವೇಷಭೂಷಣಗಳಿದ್ದವು. ಶೋಭಾಯಾತ್ರೆ ಸಾಗಿದ ರಸ್ತೆಯುದ್ದಕ್ಕೂ ನೆರೆದು ಯಾತ್ರೆ ನೋಡುತ್ತಿದ್ದ ಜನರಲ್ಲಿ ಆಧ್ಯಾತ್ಮಿಕದ ಅಲೆ, ದೇಶ ಭಕ್ತಿಯ ಅಲೆಯನ್ನೇ ಎಬ್ಬಿಸಿದವು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಶಿವಾಚಾರ್ಯರು, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎನ್ನುವ ಭಾವನೆ ಎಂದಿಗೂ ನಮ್ಮಲ್ಲಿರಬೇಕು. ನಮ್ಮ ನಡುವಿನ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕಿ ನಾವು ದೇಶದ ಉದ್ಧಾರಕ್ಕೆ ಕಂಕಣಬದ್ಧರಾಗಬೇಕು. ಶಕ್ತಿಶಾಲಿ ದೇಶವನ್ನು ಕಟ್ಟಲು ಮುಂದಾಗಬೇಕು. ನಮ್ಮ ಮಕ್ಕಳಲ್ಲಿ ದೇಶದ ಬಗ್ಗೆ ಪ್ರೀತಿಯನ್ನು ಹುಟ್ಟಿಸುವುದರ ಜೊತೆಗೆ, ಅವರಲ್ಲಿ ಆಧ್ಯಾತ್ಮಿಕ ಅರಿವನ್ನೂ, ಸಂಸ್ಕೃತಿಯನ್ನೂ ಬಿತ್ತಬೇಕು. ನಮ್ಮ ಮಕ್ಕಳಲ್ಲಿ ಅಂತಹ ಗುಣಗಳು ಇಂತಹ ಸಮ್ಮೇಳನಗಳಿಂದ ಬರುತ್ತವೆ. ಆದ್ದರಿಂದ ಎಲ್ಲಿಯಾದರೂ ಇಂತಹ ಸಮ್ಮೇಳನಗಳು ನಡೆದರೆ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಿ. ಇಂದು ಇಲ್ಲಿ ನೆರೆದಿರುವ ಹಿಂದೂ ಸಮಾಜದ ಜನರನ್ನು ಕಂಡು ಸಂತಸವಾಗಿದೆ ಎಂದು ಹೇಳಿದರು.
ಖವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಮಾರ್ಗದರ್ಶನದಲ್ಲಿ ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ ಮತ್ತು ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ವ್ಯವಸ್ಥೆ ನಿರ್ವಹಿಸಿದರು. ಈ ಸಂದರ್ಭದಲ್ಲಿ ಗಜೇಂದ್ರಗಡ ಪಿಎಸ್‌ಐ ಡಿ. ಪ್ರಕಾಶ, ರೋಣ ಪಿಎಸ್‌ಐ ಪ್ರಕಾಶ ಬಣಕಾರ, ಅಪರಾಧ ವಿಭಾಗದ ಪಿಎಸ್‌ಐ ಚವಡಿ ಬೀರಣ್ಣ ಅವರ ಜೊತೆಗೆ ರೋಣ, ಗಜೇಂದ್ರಗಡ, ಮುಂಡರಗಿ, ನರಗುಂದ ಠಾಣಾ ಸಿಬ್ಬಂದಿಗಳು ಇದ್ದರು.
ಕೊಂತಿ ಮಲ್ಲಪ್ಪನ ಗುಡಿಯಿಂದ ಪ್ರಾರಂಭವಾದ ಶೋಭಾಯಾತ್ರೆಯು ಶ್ರೀ ದ್ಯಾಮವ್ವ-ಶ್ರೀ ವೀರಭದ್ರ ದೇವಸ್ಥಾನ, ಶ್ರೀ ವಿನಾಯಕ ದೇವಸ್ಥಾನ ಮೂಲಕ ಸಂತೆ ಬಜಾರ, ಹಳೆ ಬಸ್ ನಿಲ್ದಾಣ, ಪಟ್ಟಣದ ಮುಖ್ಯ ಬೀದಿ, ಹೊಸ ಬಸ್ ನಿಲ್ದಾಣದ ಮೂಲಕ ಸಮಾರಂಭದ ಮುಖ್ಯ ವೇದಿಕೆ ಹಿರೇಮಠದ ಮುಖ್ಯ ವೇದಿಕೆಗೆ ತಲುಪಿತು.



