ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬ್ರಿಟಿಷರ ಕಪಿಮುಷ್ಟಿಯಿಂದ ಭಾರತವನ್ನು ಮುಕ್ತಗೊಳಿಸುವಲ್ಲಿ ಅನೇಕ ಮಹನೀಯರು ಹೋರಾಟ, ತ್ಯಾಗ, ಬಲಿದಾನ ಮಾಡಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶದ ಸರ್ವತೋಮುಖ ಅಭಿವೃದ್ಧಿ ಹಾಗೂ ದೇಶದೊಳಗಿನ ಆಂತರಿಕ ಸಮಸ್ಯೆಗಳ ನಿಗ್ರಹಕ್ಕಾಗಿ ಜಾತಿ, ಧರ್ಮ, ಪಕ್ಷ ಭೇದಭಾವ ಬದಿಗೊತ್ತಿ ನಾವೆಲ್ಲ ಭಾರತ ಮಾತೆಯ ಮಕ್ಕಳೆಂಬ ಒಗ್ಗಟ್ಟಿನ ಮಂತ್ರ, ನವಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಮುನ್ನಡೆಯಬೇಕಾಗಿದೆ ಎಂದು ತಹಸೀಲ್ದಾರ ಧನಂಜಯ ಎಂ ಹೇಳಿದರು.
ಅವರು ಪಟ್ಟಣದ ಉಮಾವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಲಕ್ಷ್ಮೇಶ್ವರ ತಾಲೂಕಾಡಳಿತದಿಂದ ನಡೆದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಕೃಷಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆದಿರುವ ಭಾರತವೂ ಸಹ ಅನಕ್ಷರತೆ, ಅಪೌಷ್ಠಿಕತೆ, ಅನಾರೋಗ್ಯ, ಭ್ರಷ್ಟಾಚಾರ, ಭಯೋತ್ಪಾದನೆ, ಜಾತೀಯತೆ, ಕೋಮುವಾದ ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಒಪ್ಪಲೇಬೇಕು. ಈ ದೇಶದ ಸಂಪತ್ತಾದ ಯುವ ಜನಾಂಗ ದುಶ್ಚಟ, ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿದ್ದು ಪ್ರಜ್ಞಾವಂತಿಕೆಯಿಂದ ದೇಶದ ಶ್ರೇಷ್ಠತೆ, ಏಕತೆ, ಸ್ವಚ್ಛತೆ, ಪ್ರಗತಿಗಾಗಿ ಸಂಕಲ್ಪಗೈಯಬೇಕು ಎಂದರು.
ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿ, ನನ್ನ ದೇಶ, ನನ್ನ ಜನ, ನಾವು ಭಾರತಾಂಬೆಯ ಮಕ್ಕಳು ಎಂಬ ದೇಶಭಕ್ತಿ ಮೂಡಿ ಈ ದೇಶದ ಶಕ್ತಿಯಾಗಿರುವ ರೈತ, ಸೈನಿಕ ಮತ್ತು ಶಿಕ್ಷಕರನ್ನು ಸದಾ ಗೌರವದಿಂದ ಕಾಣಬೇಕು. ದೇಶದ ಸ್ವಾತಂತ್ರ ಹೋರಾಟದಲ್ಲಿ ಲಕ್ಷ್ಮೇಶ್ವರ ಸೇರಿ ತಾಲೂಕಿನ ಶಿಗ್ಲಿ, ಸೂರಣಗಿ, ಬಾಲೇಹೊಸೂರ, ಕೂಗನೂರ ಮುಂತಾದ ಅನೇಕ ಗ್ರಾಮಗಳ ನೂರಾರು ಹೋರಾಟಗಾರರು ತಮ್ಮನ್ನೇ ಸಮರ್ಪಿಸಿಕೊಂಡಿದ್ದಾರೆ. ಸ್ವಾತಂತ್ರ್ಯೋತ್ಸವದ ದಿನ ದೇಶದ ಭವಿಷ್ಯದ ಕನಸುಗಳ ಸಾಕಾರಕ್ಕೆ ಕೈಜೋಡಿಸುವ ಸಂಕಲ್ಪ ಮತ್ತು ದೇಶಕ್ಕಾಗಿ ನಮ್ಮದೇನು ಕೊಡುಗೆ ಎಂಬ ಆತ್ಮಾವಲೋಕನ ನಮ್ಮೆಲ್ಲರದ್ದಾಗಬೇಕು ಎಂದರು.
ದ್ವಜಾರೋಹಣದ ಬಳಿಕ ಮೈದಾನದಲ್ಲಿ ಪೊಲೀಸ್, ಎನ್‌ಸಿಸಿ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪಥಸಂಚಲನದ ನೇತೃತ್ವವನ್ನು ಪಿಎಸ್‌ಐ ನಾಗರಾಜ ಗಡಾದ ವಹಿಸಿ ನೆರವೇರಿಸಿದರು. ವಿವಿಧ ಶಾಲಾ ಮಕ್ಕಳಿಂದ, ಬಿ.ಡಿ ತಟ್ಟಿ ಹಾಗೂ ಅರಳು ವಿಶೇಷ ಚೇತನ ಮಕ್ಕಳಿಂದ ನಡೆದ ವೇಷ-ಭೂಷಣ, ದೇಶಭಕ್ತಿ ಗೀತೆಗಳ ನೃತ್ಯ ಎಲ್ಲರ ಗಮನ ಸೆಳೆಯಿತು. ಸ್ಕೂಲ್ ಚಂದನ ಶಾಲೆಯ ಮಕ್ಕಳ ವಿಶೇಷ ಬ್ಯಾಂಡ್ ಪ್ರದರ್ಶನ ಸ್ವಾತಂತ್ರ್ಯೋತ್ಸವದ ಕಳೆ ಹೆಚ್ಚಿಸಿತು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಸದಸ್ಯ ಮಹೇಶ ಹೊಗೆಸೊಪ್ಪಿನ, ಗ್ಯಾರಂಟಿ ಸಮಿತಿ ಸದಸ್ಯರಾದ ರಾಮಣ್ಣ ಲಮಾಣಿ, ಶಿವರಾಜಗೌಡ ಪಾಟೀಲ, ಗ್ರೇಡ್ 2 ತಹಸೀಲ್ದಾರ ಮಂಜುನಾಥ ಅಮಾಸಿ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಎಪಿಎಂಸಿ ಕಾರ್ಯದರ್ಶಿ ರುದ್ರಗೌಡ ಪಾಟೀಲ, ಉಪನೋಂದಣಾಧಿಕಾರಿ ಎಸ್.ಕೆ. ಜಲರಡ್ಡಿ, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ನೌಕರ ಸಂಘದ ಅಧ್ಯಕ್ಷ ಗುರುರಾಜ ಹವಳದ ಸೇರಿ ಪುರಸಭೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕವೃಂದ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಂದಾಯ ನಿರೀಕ್ಷಕ ಎನ್.ಎ ನದಾಫ್ ಸ್ವಾಗತಿಸಿದರು. ಶಿಕ್ಷಣ ಇಲಾಖೆಯ ಈಶ್ವರ ಮೆಡ್ಲೇರಿ, ಸತೀಶ ಬೋಮಲೆ, ಉಮೇಶ ನೇಕಾರ, ಎನ್.ಎ. ಮುಲ್ಲಾ ನಿರ್ವಹಿಸಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ರಸಪ್ರಶ್ನೆ, ವೇಷಭೂಷಣ ಇತ್ಯಾದಿ ಸ್ಪರ್ಧೆಗಳ ವಿಜೇತರಿಗೆ ಪಾರಿತೋಷಕ, ಪ್ರಮಾಣ ಪತ್ರ ನೀಡಲಾಯಿತು. ಪಂಥಸಂಚಲನ ಸ್ಫರ್ಧೆಯಲ್ಲಿ ದಿ ಯೂನಿಕ್ ಶಾಲೆ-ಪ್ರಥಮ, ಲಿಟಲ್ ಹಾಟ್ಸ್ ಸ್ಕೂಲ್-ದ್ವಿತೀಯ, ದೂದಪೀರಾಂ ಉರ್ದು ಶಾಲೆ-ತೃತೀಯ ಸ್ಥಾನ ಪಡೆದವು. ನೃತ್ಯ ಸ್ಫರ್ಧೆಯಲ್ಲಿ ಎಸ್‌ಟಿಪಿಎಂಬಿ-ಪ್ರಥಮ, ಪಿಎಸ್‌ಬಿಡಿ-ದ್ವಿತೀಯ, ಬಿಸಿಎನ್ ತಂಡದವರು ತೃತೀಯ ಸ್ಥಾನ ಪಡೆದರು.